ಫ್ಯಾಮಿಲಿ ಫ್ರೆಂಡ್ಸ್ ಕುಂಡಡ್ಕ ಇದರ ಆಶ್ರಯದಲ್ಲಿ ಪುರುಷರ 58 ಕೆ.ಜಿ.ವಿಭಾಗದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾಕೂಟ ಸ್ನೇಹ ಸೌಹಾರ್ದ ಟ್ರೋಫಿ- 2022 ಫೆ.19 ರಂದು ಕುಂಡಡ್ಕ ಶ್ರೀ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಮಾತನಾಡಿ ಕ್ರೀಡಾಕೂಟದ ಆಯೋಜನೆಯ ಹಿಂದೆ ಸಂಘಟಕರ ಪರಿಶ್ರಮ ಸಾಕಷ್ಟು ಇರುತ್ತದೆ. ಇದನ್ನು ಅರಿತುಕೊಂಡು ಪ್ರತಿಯೊಬ್ಬರು ಪ್ರೋತ್ಸಾಹ ನೀಡಿದಾಗ ಯಶಸ್ಸು ದೊರೆಯಲು ಸಾಧ್ಯವಿದೆ. ಕುಂಡಡ್ಕ ಪ್ಯಾಮಿಲಿ ಫ್ರೆಂಡ್ಸ್ ಪ್ರಯತ್ನ ಶ್ಲಾಘನೀಯ ಎಂದರು.
ಬೆಳ್ಳಾರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ ಇಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಈ ವೇದಿಕೆ ಮುಂಬರುವ ಸಾಧನೆಗೆ ಸ್ಪೂರ್ತಿದಾಯಕವಾಗಬೇಕು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಶೀಯ ಕ್ರೀಡೆ ಕಬಡ್ಡಿಯನ್ನು ಪ್ರತಿನಿಧಿಸುವ ಆಟಗಾರರು ಇಲ್ಲಿಂದ ಮೂಡಿಬರಲಿ ಎಂದರು.
ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಯುವಕರು ಕಬಡ್ಡಿ ಪಂದ್ಯಾಕೂಟ ಆಯೋಜಿಸಿದ್ದು ಇದು ಅತ್ಯುತ್ತಮ ಪ್ರಯತ್ನ. ತನ್ಮೂಲಕ ಸಾಮಾಜಿಕ ಕಾರ್ಯ ಚಟುವಟಿಕೆಯತ್ತಲೂ ಪುರುಷೋತ್ತಮ ಅವರ ನೇತೃತ್ವದ ತಂಡ ಮುಂದಡಿ ಇಟ್ಟಿರುವುದು ಪ್ರಶಂಸನೀಯ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ ಇಂತಹ ಸುಂದರ ಪಂದ್ಯಾವಳಿಯ ಆಯೋಜನೆಗೆ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರು ಅಭಿನಂದನೆಗೆ ಅರ್ಹರು. ಹೊಸ ಹೊಸ ಪ್ರತಿಭೆಗಳಿಗೆ ಈ ಕಬಡ್ಡಿ ಪಂದ್ಯಾಕೂಟ ಸ್ಪೂರ್ತಿ ತುಂಬಲಿ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಜೇಸಿ ಆರೀಫ್ ಬೆಳ್ಳಾರೆ, ಉಪ ವಲಯ ಅರಣ್ಯಧಿಕಾರಿ ರವಿಚಂದ್ರ ಪಡುಬೆಟ್ಟು, ಪೆರುವಾಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ, ಯುನೈಟೆಡ್ ಇಂಡಿಯಾ ವಿಮಾ ಸಲಹೆಗಾರ ಸುಜಿತ್ ರೈ ಪಟ್ಟೆ, ನೋಟರಿ ನ್ಯಾಯವಾದಿ ಮಹೇಶ್ ಕೆ ಸವಣೂರು, ಮಣಿಕ್ಕಾರ ಸರಕಾರಿ ಪ್ರೌಢಶಾಲಾ ಕಾರ್ಯಾಧ್ಯಕ್ಷ ಸುನಿಲ್ ರೈ ಪಾಲ್ತಾಡು, ಸುಬ್ರಹ್ಮಣ್ಯ ಡಿಸಿಸಿ ಬ್ಯಾಂಕ್ ನ ಶರತ್ ಕೆ.ವಿ., ಮುಂಡೂರು ಗ್ರಾ.ಪಂ.ಮಾಜಿ ಸದಸ್ಯ ಗಣೇಶ ನೇರೋಳ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ರಮೇಶ್ ಬೆಳ್ಳಾರೆ ವಂದಿಸಿದರು.
ಪಂದ್ಯಾಕೂಟಕ್ಕೆ ಸಂಪೂರ್ಣ ಸಹಕಾರ ನೀಡಿದ ಟೀಂ ಯುನೈಟೆಡ್ ಈಗಲ್ಸ್ ಪದವು, ಶ್ರೀರಾಮ ಕ್ರಿಕೆಟರ್ಸ್ ಪುಣ್ಚಪ್ಪಾಡಿ ಹಾಗೂ ಕ್ರೀಡಾಕೂಟಕ್ಕೆ ಪ್ರಾಯೋಜಕರಾಗಿ ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬೆಳಗ್ಗೆ ಪಂದ್ಯಾಕೂಟವನ್ನು ಐತ್ತ ಪಾಟಾಜೆ ಉದ್ಘಾಟಿಸಿದರು. ಕುಂಡಡ್ಕ ಶ್ರೀ ಬ್ರಹ್ಮ ಮೊಗೇರ್ಕಳ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚನಿಯ ಕುಂಡಡ್ಕ, ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಆನಂದ ನಿಡ್ಮಾರು, ಪ್ರದೀಪ್ ನೆಕ್ಕರೆ, ಸುರೇಶ್ ಚೆಂಬುತ್ತೋಡಿ ಮೊದಲಾದವರು ಉಪಸ್ಥಿತರಿದ್ದರು.