ಎಡಮಂಗಲ ಗ್ರಾಮದ ಕಾರಣೀಕ ಕ್ಷೇತ್ರ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವಾಶಿಷ್ಟ ಸಂಪ್ರದಾಯ ಪ್ರಕಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಸೇರಿದಂತೆ ವಾರ್ಷಿಕ ಜಾತ್ರೋತ್ಸವವು ಫೆ.12ರಂದು ಆರಂಭಗೊಂಡಿದ್ದು, ಫೆ.15 ಮಂಗಳವಾರದಂದು ಬೆಳಗ್ಗೆ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ಬಲಿಯೊಂದಿಗೆ ಕೋಲಾಟ ಹಾಗೂ ಶ್ರೀ ಲಕ್ಷ್ಮಣ ಆಚಾರ್ಯ ಬಳಗದವರಿಂದ ಕೀಲುಕುದುರೆ ಮತ್ತು ಬೊಂಬೆಯಾಟದೊಂದಿಗೆ ನಡೆದು ಬಳಿಕ ಮಹಾರಥೋತ್ಸವ ನಡೆಯಿತು. ನಂತರ ಪಾಟಾಳಿ ಕಟ್ಟೆ ಪೂಜೆ ಮತ್ತು ಮರೋಳಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಉದ್ರಾಂಡಿ ದೈವಗಳ ಓಲೆ ಸವಾರಿ ನಡೆಯಿತು. ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಭೂತಬಲಿ ಮತ್ತು “ಶ್ರೀ ದೇವರ ಶಯನೋತ್ಸವ” ನೆರವೇರಿತು. ಊರ-ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು.
ಜಾತ್ರೋತ್ಸವವು ಫೆ.18ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದ್ದು, ಫೆ.16 ಬುಧವಾರದಂದು ಬೆಳಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಪಂಚಾಮೃತಾಭಿಷೇಕ ನಡೆಯಲಿದ್ದು, ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್ ದೈವದ ನೇಮ, ರಾತ್ರಿ ಬಲಿ ಹೊರಟು ವಸಂತ ಕಟ್ಟೆಯಲ್ಲಿ ಸಾರ್ವಜನಿಕ ಕಟ್ಟೆಪೂಜೆ, ಬಿಲ್ವಪತ್ರೆ ಕಟ್ಟೆಯಲ್ಲಿ ಕಟ್ಟೆಪೂಜೆ ನಂತರ ನೂಚಿಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಟ್ಟೆಪೂಜೆ ಹಾಗೂ ಕುಮಾರಧಾರ ಭಂಡಾರಗಯದಲ್ಲಿ “ಅವಭೃತಸ್ನಾನ”, ಧ್ವಜ ಅವರೋಹಣ ನಡೆಯಲಿರುವುದು. ಫೆ.17 ಗುರುವಾರದಂದು ಬೆಳಗ್ಗೆ ಗಂಟೆ 9.00ರಿಂದ ಗಣಪತಿ ಹವನ, ಕಲಶ ಪೂಜೆ, ರುದ್ರಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, “ಮಂತ್ರಾಕ್ಷತೆ”, ಪ್ರಸಾದ ವಿತರಣೆ ನಡೆದು “ಮಹಾ ಅನ್ನಸಂತರ್ಪಣೆ” ನಡೆಯಲಿದೆ. ಫೆ.18 ಶುಕ್ರವಾರದಂದು ಬೆಳಗ್ಗೆ ಮರೋಳಿ ಶಿರಾಡಿ ರಾಜನ್ ದೈವದ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ನೆರವೇರಲಿದೆ.