
ಸುಳ್ಯ ಬಿಜೆಪಿಯ ಹಿರಿಯ ಮುತ್ಸದ್ದಿ ,ಆದರ್ಶ ಕಾರ್ಯಕರ್ತ ಆರ್ ಉಮೇಶ್ ವಾಗ್ಲೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ಫೆ.5 ರಂದು ಸುಳ್ಯ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ “ಎಂದಿಗೂ ಅಚ್ಚಾಗಿ ಉಳಿಯುವಂತೆ ಮಾಡಿದ ಸಾಧಕ ಹಾಗೂ ಸಮಾಜದ ಮೇಲಿನ ಜವಾಬ್ದಾರಿಯಿಂದ ಸಂಘಟನೆಯ ಬೆಳೆಸಲು ಶ್ರಮವಹಿಸಿ ಎಲ್ಲರ ಮನಗೆದ್ದ ವಾಗ್ಲೆ ವೈಯಕ್ತಿಕ ವಿಚಾರಗಳ ಚರ್ಚಿಸದೆ ಸುಳ್ಯದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಿದ್ದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ವಾಗ್ಲೆಯವರ ಕುರಿತು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ “ಎಲ್ಲರೂ ಅಧಿಕಾರದ ಮೇಲೆ ಅಪೇಕ್ಷೆ ಮಾಡುತ್ತಾರೆ. ಆದರೆ ವಾಗ್ಲೆ ಸಂಘಟನೆ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರೆ ಹೊರತು ಅಧಿಕಾರದ ಮೇಲೆ ಅಪೇಕ್ಷೆ ಇರಲಿಲ್ಲ. ಇವರು ಸುಳ್ಯದ ಅಭಿವೃದ್ಧಿಗೆ ಒತ್ತಡ ಮಾಡುತ್ತಿದ್ದರಿಂದ ಸುಳ್ಯ ತಾಲೂಕು ಅಭಿವೃದ್ಧಿ ಕಾಣುತ್ತಾ ಇದೆ ಎಂದರು. ಕಾರ್ಯಕ್ರಮದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯ ಚಂದ್ರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಚಂದ್ರಶೇಖರ ತಳೂರು, ಉದ್ಯಮಿ ಮತ್ತು ಜನತಾದಳದ ನಾಯಕರು ಎಂ. ಬಿ. ಸದಾಶಿವ, ವರ್ತಕ ಮತ್ತು ವಾಣಿಜ್ಯೋದ್ಯಮಿಗಳ ಸಂಘ ಸುಳ್ಯದ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ಕಾಂಗ್ರೆಸ್ ಕಾರ್ಯದರ್ಶಿ ಎ.ಎನ್ ಗಂಗಾಧರ ಇವರುಗಳು ಉಮೇಶ್ ವಾಗ್ಲೆ ಯವರ ಕುರಿತು ಮೆಚ್ಚುಗೆ ಹಾಗೂ ಸಾಧನೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ನ್ಯಾಯವಾದಿ ಹಾಗೂ ಕಾಂಗ್ರೆಸ್ ನಾಯಕರಾದ ಎನ್. ಜಯಪ್ರಕಾಶ್ ರೈ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿ.ಜಿ. ನಾಯಕ್ ಸ್ವಾಗತಿಸಿ, ಪಿ.ಕೆ ಉಮೇಶ್ ನಿರೂಪಿಸಿದರು. ನಿವೃತ್ತ ಪ್ರಾಂಶುಪಾಲ ಗೋಪಾಲಕೃಷ್ಣ , ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕುಂದಡ್ಕ ಮತ್ತು ಎ.ಟಿ ಕುಸುಮಾಧರ ನಿರೂಪಿಸಿದರು.