ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ವಿವಿಧ ರಾಜಕೀಯ ಮತ್ತು ದಲಿತ ಸಂಘಟನೆಗಳ ವತಿಯಿಂದ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸುಳ್ಯದಲ್ಲಿ ಪ್ರತಿಭಟನೆ

ಕಾಂಗ್ರೇಸ್ ಪಕ್ಷದ ವತಿಯಿಂದ ಉತ್ತರ ಪ್ರದೇಶ ಹತ್ರಾಸ್ ಎಂಬಲ್ಲಿ ದಲಿತ ಯುವತಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದಿರುವ ಘಟನೆಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ತಾಲೂಕಿನ ದಲಿತ ಪರ ಸಂಘಟನೆಗಳ ಸಮಾನಮನಸ್ಕರ ಸಹಯೋಗದೊಂದಿಗೆ ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಜೈಲ್ ಭರೋ ಚಳುವಳಿ ಅ.೧೦ರಂದು ನಡೆಯಿತು. ಪ್ರತಿಭಟನೆಯ ಅಂಗವಾಗಿ ಸುಳ್ಯ ಹಳೆಗೇಟಿನಿಂದ ಗಾಂಧಿನಗರ ಪೆಟ್ರೋಲ್ ಬಂಕ್‌ನವರೆಗೆ ಕೇಂದ್ರ ಸರಕಾರದ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿ ಕಾಲ್ನಡಿಗೆ ಜಾಥಮೂಲಕ ತೆರಳಿ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು.

. . . . . . . . .


ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಆನಂದ ಬೆಳ್ಳಾರೆ “ಬಿಜೆಪಿ ಪಕ್ಷದವರು ಆಡಳಿತಕ್ಕೆ ಬಂದಾಗಿನಿಂದ ದಲಿತರ ಮತ್ತು ಹಿಂದುಳಿದ ಮಹಿಳೆಯರ ಮೇಲೆ ನಾನಾ ರೀತಿಯ ದಬ್ಬಳಿಕೆ ಮತ್ತು ಅತ್ಯಾಚಾರಗಳು ಕೊಲೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಮಹಿಳೆಯ ಮೇಲಿನ ಅನುಕಂಪ ಇವರಲ್ಲಿ ಕಂಡುಬರುತ್ತಿಲ್ಲ. ಮಾತೆತ್ತಿದ್ದರೆ ಮಾತೆ ಮಾತೆ ಎಂದು ಹೇಳುವ ಇವರು ಮಾತೆಯರಿಗೆ ತೊಂದರೆಯಾದಗ ಪ್ರತಿಕ್ರಯಿಸದೇ ಮೌನವಾಗಿರುವುದು ಇವರ ಬೆಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ದ.ಕ ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಸರಕಾರ ಬಂದಲ್ಲಿ ದೇಶ ಮತ್ತು ರಾಜ್ಯ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿ ದೇಶ ಮತ್ತು ರಾಜ್ಯವನ್ನು ದೀವಾಳಿಯತ್ತ ಕೊಡೊಯ್ಯುತ್ತಿದ್ದಾರೆ. ಪೆಟ್ರೋಲ್, ಡಿಸೇಲ್, ಗ್ಯಾಸ್‌ಗಳ ದರವು ಗಗನಕ್ಕೇರುತ್ತಿದ್ದು, ಕೇಳಿದರೆ ಬ್ರಿಟೀಷರಂತೆ ಪ್ರತಿಕ್ರಯಿಸುತ್ತಾರೆ. ೫೨ ಕ್ರಿಮಿನಲ್ ಕೇಸ್‌ನ್ನು ಹೊಂದಿರುವಂತಹ ಯೋಗಿ ಆದಿತ್ಯನಾಥ್‌ರವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಆ ರಾಜ್ಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಒಬ್ಬ ಕಾಲೇಜು ವಿದ್ಯಾರ್ಥಿನಿಯನ್ನು ನಾಲ್ಕು ಜನರ ತಂಡ ಅತ್ಯಾಚಾರ ನಡೆಸಿ ಕ್ರೂರವಾಗಿ ಹತ್ಯೆ ಮಾಡಿ ಅಂಗಾಂಗಳನ್ನು ಬೇರ್ಪಡಿಸಿ ರಾಕ್ಷಸತನ ಮೆರೆದ ಇವರನ್ನು ಶಿಕ್ಷಿಸಲು ಅಲ್ಲಿಯ ಮುಖ್ಯಮಂತ್ರಿಗೆ ಸಾಧ್ಯವಿಲ್ಲದಿದ್ದಾಗ ಆ ಸ್ಥಾನಕ್ಕೆ ಅವರು ರಾಜೀನಾಮೆಯನ್ನು ನೀಡಿ ಹೋಗುವುದು ಒಳ್ಳೆಯದು ಎಂದು ಹೇಳಿದರು. ದಲಿತ ಹಾಗೂ ಹಿಂದುಳಿದ ಮಹಿಳೆಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

. . . . . . .


ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ” ಹಿಂದುತ್ವದ ಹೆಸರನ್ನು ಹೇಳಿ ದೇಶದಲ್ಲಿ ಅಧಿಕಾರನ್ನು ಹಿಡಿದ ಬಿಜೆಪಿಯವರಿಗೆ ಹಿಂದು ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಕಾಣುತ್ತಿಲ್ಲವೇ. ಇವರಿಗೆ ಕಾನೂನಿನ ಭಯವೇ ಇಲ್ಲದಂತಾಗಿ ರಕ್ಷಣೆ ನೀಡುವ ಪೊಲೀಸರು ಹತ್ಯೆಗೀಡಾದ ಯುವತಿಯ ಮೃತಶರೀರವನ್ನು ಅವರ ಕುಟುಂಬಸ್ಥರಿಗೂ ನೀಡದೆ ರಾತ್ರೋರಾತ್ರಿ ದಹನ ಮಾಡಿರುವುದು ಅತ್ಯಂತ ಕೇದಕರ ಎಂದು ಹೇಳಿದರು. ದೇಶವನ್ನಾಳುವ ಪ್ರಧಾನಿ ಮೋದಿಯವರಿಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಹೆಣ್ಣು ಮತ್ತು ಕುಟುಂಬಗಳ ಪರಿವೇ ಇಲ್ಲ. ಅವರಿಗೆ ಹೆಣ್ಣಿನ ಕಷ್ಟ ಹೇಗೆ ಅರ್ಥವಾಗುತ್ತದೆ ಎಂದು ಹೇಳಿದರು. ಈ ರೀತಿಯ ಘಟನೆಗಳು ಸಮಾಜದಲ್ಲಿ ನಡೆದಾಗ ಪಕ್ಷ ಭೇದವನ್ನು ಮರೆತು ಒಟ್ಟಾಗಿ ಪ್ರತಿಭಟಿಸಬೇಕಾಗಿದೆ. ಕೇವಲ ಹಿಂದು ರಾಷ್ಟ್ರವನ್ನು ಕಟ್ಟಿದ್ದಾರೆ ಸಾಲದು ಹಿಂದೂ ಯುವತಿಯರಿಗೇ ರಕ್ಷಣೆಯನ್ನು ಕೊಡಬೇಕು. ನಿಮ್ಮಿಂದ ರಕ್ಷಣೆ ಕೊಡಲು ಸಾಧ್ಯವಿಲ್ಲದಿದ್ದರೆ ಒಂದು ಹೆಣ್ಣು ಮಗು ದೇಶದಲ್ಲಿ ಹುಟ್ಟುವಾಗಲೇ ಅವರ ರಕ್ಷಣೆಗೆ ಬಳಸಲು ಬಂದೂಕಿನ ಪರವಾನಿಗೆಯನ್ನಾದರೂ ನೀಡಿ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳುತ್ತೇವೆ. ಅತ್ಯಾಚಾರಿಗಳಿಗೆ ನಡು ಬೀದಿಯಲ್ಲಿ ಮರಣದಂಡನೆಯನ್ನು ಅಥವಾ ಕಲ್ಲು ಎಸೆದು ಕೊಲ್ಲುವ ಕಾನೂನನ್ನು ಜಾರಿ ತನ್ನಿ. ಆಗ ಮಾತ್ರ ಈ ಕಾಮುಕರಿಂದ ಹೆಣ್ಣು ಕುಲದ ರಕ್ಷಣೆ ಸಾಧ್ಯ ಎಂದು ಹೇಳಿದರು. ರೈತರ ವಿರುದ್ಧದ ಮಸೂದೆಗಳಿಗೆ ಸುಗ್ರೀವಾಜ್ಞೆಯನ್ನು ತರುವುದನ್ನು ನಿಲ್ಲಿಸಿ ಈ ರೀತಿಯ ಕಾನೂನುಗಳಿಗೆ ಸುಗ್ರೀವಾಜ್ಞೆಯನ್ನು ತನ್ನಿ ಎಂದು ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಮಾತನಾಡಿ ” ಅತ್ಯಾಚಾರಿಗಳನ್ನು ಬೆಂಬಲಿಸುವುದು ಬಿಜೆಪಿಯವರಿಗೆ ವಾಡಿಕೆಯಾಗಿದೆ. ಅಧಿಕಾರದ ಆಸೆಗಾಗಿ ಕಾಂಗ್ರೇಸ್ ಪಕ್ಷ ಹುಟ್ಟಿಕೊಂಡಿಲ್ಲ ಜನಪರವಾದ ಕಾನೂನುಗಳನ್ನು ಜಾರಿ ತಂದು ರಾಷ್ಟ್ರದ ಅಭಿವೃದ್ಧಿಗೆ ಮತ್ತು ಎಲ್ಲರನ್ನು ಸಮಾನ ರೀತಿಯಲ್ಲಿ ರಕ್ಷಣೆ ಮಾಡುವ ಪಕ್ಷ ಕಾಂಗ್ರೇಸ್‌ಗಿದೆ ಎಂದು ಹೇಳಿದರು. ಬಿಜೆಪಿ ಪಕ್ಷವು ವಿವಿಧ ಕಾನೂನುಗಳನ್ನು ಜಾರಿಗೆ ತಂದು ದೇಶದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದರೆ, ಕಾಂಗ್ರೇಸ್ ಆಡಳಿತದಲ್ಲಿರುವಾಗ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನತೆಗೆ ಆಶ್ರಯ ನೀಡುತ್ತಿತ್ತು. ಇದು ಎರಡು ಪಕ್ಷಗಳ ನಡುವಿನ ವ್ಯತ್ಯಾಸವಾಗಿದೆ. ಡಾ| ಬಾಬಾ ಸಾಹೇಬ್ ಅಂಬೇಡ್ಕರ್‌ರವರು ನೀಡಿರುವ ಸಂವಿಧಾನವನ್ನು ಗೌರವಿಸಿ ನಾವು ನಡೆದರೆ ಅದನ್ನು ತಿದ್ದುಪಡಿ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಪಕ್ಷದ ಉಪಾಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ “ಬಿಜೆಪಿ ಸರಕಾರ ಬಂದಾಗಿನಿಂದ ದಲಿತರ ಅಲ್ಪಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಆತ್ಮ ನಿರ್ಭರದ ಬಗ್ಗೆ ಮಾತನಾಡುವ ಇವರು ದಲಿತ ಸಮೂದಾಯಕ್ಕೆ ಸೇರಿದ ಬಡವರನ್ನು ಥಳಿಸಿ ಅವರಿಗೆ ಮಲ ತಿನ್ನಿಸುವ ಕಾರ್ಯ ಮಾಡುತ್ತಿದ್ದಾರೆ. ಇವರಿಗೆ ಆತ್ಮವೆಂಬುವುದು ಇದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೇಸ್ ಪಕ್ಷದವರು ಇಂತಹ ಘಟನೆಗಳಿಗೆ ಪ್ರತಿಭಟಿಸಲು ಮುಂದಿನ ದಿನಗಳಲ್ಲಿಯೂ ನಮ್ಮ ಸಹಕಾರವನ್ನು ಕೇಳಿದರೆ ನಾವು ರಾಜಕೀಯ ಮರೆತು ಸಮಾಜದ ನ್ಯಾಯಕ್ಕಾಗಿ ಹೋರಾಟಕ್ಕೆ ಬರಲು ಸಿದ್ಧ ಎಂದು ಹೇಳಿದರು.
ದಲಿತ ಸಂಘದ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ಮಾತನಾಡಿ ಸುಳ್ಯದ ಶಾಸಕರು ಕನಿಷ್ಟ ಪಕ್ಷ ಅತ್ಯಾಚಾರಿಗಳ ವಿರುದ್ಧ ಧ್ವನಿಯೆತ್ತಿ ಹತ್ಯೆಗೀಡಾದ ಮಹಿಳೆಗೆ ನ್ಯಾಯ ಒದಗಿಸುವಂತೆ ಪತ್ರಿಕಾಗೋಷ್ಠಿಯನ್ನಾದರೂ ಕರೆದು ಅವರ ಹಿರಿಯ ನಾಯಕರಿಗೆ ಮನವಿಯನ್ನಾದರೂ ಮಾಡಬಹುದಿತ್ತು ಎಂದು ಹೇಳಿದರು. ಅದೇ ಸಮುದಾಯಕ್ಕೆ ಸೇರಿದ ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸದಿದ್ದಾರೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಯುವತಿಯರೂ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.


ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ಕುಮಾರ್ ಮಾತನಾಡಿ ” ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಬಿಜೆಪಿಯವರ ಸರ್ವಾಧಿಕಾರ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ನ್ಯಾಯ ಒದಗಿಸುವುದನ್ನು ಬಿಟ್ಟು, ಸಾಕ್ಷ್ಯನಾಶ ಮಾಡಲು ಹೋರಟಿರುವ ಯೋಗಿ ಆದಿತ್ಯನಾಥ್‌ರವರು ಒಬ್ಬ ಸ್ವಾಮೀಜಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಕೇವಲ ಯೋಗಿ ಆದಿತ್ಯನಾಥ್‌ರವರ ಸ್ವಾಮೀ ಸ್ಥಾನದ ಬಗ್ಗೆ ಮಾತನಾಡುತ್ತಿದ್ದೇನೆ ವಿನಃ ಇಡೀ ಯೋಗಿ ಪಂಗಡದವರ ಬಗ್ಗೆ ಈ ಮಾತನ್ನು ಹೇಳುತ್ತಿಲ್ಲ ಎಂದು ಹೇಳಿದರು. ಹಿಂದೂ ಸಂಪ್ರಾದಾಯವೇ ತಲೆ ತಗ್ಗಿಸುವ ಕೆಲಸವನ್ನು ಉತ್ತರಪ್ರದೇಶದಲ್ಲಿ ಮಾಡಿದ್ದು, ಹತ್ಯೆಗೀಡಾದ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಅಂತ್ಯಕ್ರಿಯೆ ನೆರವೇರಿಸಿರುವುದು ರಾಕ್ಷಸತನವಾಗಿದೆ.  ಬ್ರಿಟೀಷರ ವಿರುದ್ಧ ಹೋರಾಡಿದ ಕಾಂಗ್ರೇಸ್ ಪಕ್ಷಕ್ಕೆ ಬಿಜೆಪಿಯವರ ವಿರುದ್ಧ ಹೋರಾಡುವುದು ಕಷ್ಟವೇನಲ್ಲ ಎಂದು ಹೇಳಿದರು. ಹಿಂದೂ ಧರ್ಮದ ಯೋಗಿ ಆದಿತ್ಯನಾಥ್‌ರವರಿಗೆ ಒಂದು ನ್ಯಾಯವಾದರೆ ಹತ್ಯೆಗೀಡಾದ ಹಿಂದೂ ಯುವತಿ ಮನೀಶಳಿಗೆ ಒಂದು ನ್ಯಾಯ ಇದು ಬಿಜೆಪಿ ಆಡಳಿತದ ವೈಫಲ್ಯವಾಗಿದೆ. ಈ ರೀತಿಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರೆ ಗುಂಡು ಹೊಡೆದು ಕೊಲ್ಲುವ ಜೀವ ಬೆದರಿಕೆಯ ಕರೆಗಳನ್ನು ಮಾಡಿ ಎದುರಿಸಲು ಬರುತ್ತಾರೆ ಆದರೆ ಇಂತಹ ಟೊಳ್ಳು ಬೆದರಿಕೆಗೆ ಹೆದರುವ ವ್ಯಕ್ತಿ ನಾನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಂಟ್ ಪಿಂಟೋ ಮಾತನಾಡಿ ಕೋವಿಡ್ ಕಾರಣದಿಂದ ಮಹಿಳೆಯರ ಸಂಖ್ಯೆ ಪ್ರತಿಭಟನೆಯಲ್ಲಿ ಕಡಿಮೆ ಇರಬಹುದು ಆದರೆ ದೇಶದಲ್ಲಿ ಯಾವ ಮೂಲೆಯಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯವಾದಗ ಕಾಂಗ್ರೇಸ್ ಪಕ್ಷದ ನಮ್ಮ ಮಹಿಳಾ ಕಾರ್ಯಕರ್ತರು ಧ್ವನಿಯೆತ್ತಿದ್ದಾರೆ. ಮುಂದೆಯೂ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಂಕೇತಿಕವಾಗಿ ಕೆಲವು ನಿಮಿಷಗಳ ಕಾಲ ಮುಖ್ಯರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಗರ ಕಾಂಗ್ರೇಸ್ ಅಧ್ಯಕ್ಷ ಶಶಿಧರ ಎಂ.ಜೆ ನಿರೂಪಿಸಿ, ವಂದಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರುಗಳಾದ ಕೆಪಿಸಿಸಿ ಸದಸ್ಯ ರಘು, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ವೆಂಕಪ್ಪ ಗೌಡ, ಪಿ.ಸಿ ಜಯರಾಮ, ಅನಿಲ್ ರೈ ಬೆಳ್ಳಾರೆ, ಸಂಶುದ್ಧೀನ್ ಅರಂಬೂರು, ಕೆ.ಎಂ ಮುಸ್ತಾಫ ಜನತಾ, ನಂದರಾಜ್ ಸಂಕೇಶ್, ಜಿ.ಕೆ ಹಮೀದ್, ಮಹಮ್ಮದ್ ಕುಂಞಿ ಗೂನಡ್ಕ, ಶರೀಫ್ ಕಂಠಿ, ಸಿದ್ಧೀಕ್ ಕೊಕ್ಕೋ, ಶಾಫಿ ಕುತ್ತಮೊಟ್ಟೆ, ಹಮೀದ್ ಕುತ್ತಮೊಟ್ಟೆ, ಗೋಕುಲ್‌ದಾಸ್, ರಫೀಕ್ ಪಡು, ಸವಾದ್ ಗೂನಡ್ಕ, ಸುಧೀರ್ ರೈ, ಸಚಿನ್ ರಾಜ್ ಬೆಳ್ಳಾರೆ, ಭವಾನಿಶಂಕರ್ ಕಲ್ಮಡ್ಕ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾದ ದಯಾಕರ ಆಳ್ವ, ರಾಕೇಶ್ ಕುಂಟಿಕಾನ, ಚೋಮ ನಾವೂರು, ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಪಿ ಜಾನಿ, ಸುಳ್ಯ ತಾಲೂಕು ದಲಿತ ಸಂಘರ್ಷ ಸಮಿತಿ, ಮೊಗೇರ ಸೇವಾ ಸಂಘ, ದಲಿತ ಮಹಿಳಾ ವೇದಿಕೆ, ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿ, ಆದಿ ಸಮಾಜ ಸೇವಾ ಸಂಘ, ಮಹಿಳಾ ಕಾಂಗ್ರೇಸ್ ಸಮಿತಿ, ಸ್ನೇಹ ಸಂಗಮ ಅಟೋ ಚಾಲಕರ ಸಂಘ ಇದರ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.      


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading