ಪಂಜ ದೇವಸ್ಥಾನಕ್ಕೆ ಅರ್ಚಕರ ನೇಮಕ ವಿವಾದ – ಹಿನ್ನೆಲೆ ಪರಿಶೀಲಿಸದೆ ನಿಯೋಜನೆ ಮಾಡುವುದು ಸರಿಯಲ್ಲ; ಕೆಮ್ಮಿಂಜೆ ತಂತ್ರಿಗಳ ಸ್ಪಷ್ಟನೆ

​ಪಂಜ: ಕ್ಷೇತ್ರಕ್ಕೆ ಪೂಜೆಗಾಗಿ ಅರ್ಚಕರನ್ನು ನಿಯೋಜಿಸುವ ಮೊದಲು ಅವರ ಕುಟುಂಬದ ಹಿನ್ನೆಲೆ, ಈ ಹಿಂದೆ ಅವರು ಎಲ್ಲಿ ಸೇವೆ ಸಲ್ಲಿಸಿದ್ದಾರೆ ಹಾಗೂ ಅವರ ಅರ್ಹತೆಗಳೇನು ಎಂಬುದನ್ನು ಆಡಳಿತ ಮಂಡಳಿಯು ಕೂಲಂಕಷವಾಗಿ ಪರಿಶೀಲಿಸಿ ಕರೆತರಬೇಕಾದ ಮಹತ್ವದ ಜವಬ್ದಾರಿ ಇದೆ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿ ತಿಳಿಸಿದ್ದಾರೆ.
​ಕ್ಷೇತ್ರಕ್ಕೆ ನೂತನವಾಗಿ ಅರ್ಚಕರನ್ನು ನೇಮಕ ಮಾಡಿರುವ ವಿಚಾರವಾಗಿ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದ್ದಾರೆ.
​ಪೂಜಾ ಪದ್ಧತಿಯ ಅರಿವಿರಲಿಲ್ಲ:
“ಸಂಬಂಧಪಟ್ಟ ವ್ಯಕ್ತಿಯನ್ನು ನಮ್ಮ ಮನೆಗೆ ಕರೆತಂದ ಸಂದರ್ಭದಲ್ಲಿ, ನಮ್ಮ ಪಂಜ ಕ್ಷೇತ್ರದ ಪೂಜಾ ಸಂಪ್ರದಾಯ ಹಾಗೂ ವಿಧಿ-ವಿಧಾನಗಳ ಬಗ್ಗೆ ಪ್ರಶ್ನಿಸಲಾಯಿತು. ಆದರೆ ಅವರಿಗೆ ಕ್ಷೇತ್ರದ ಪದ್ಧತಿಯ ಬಗ್ಗೆ ಯಾವುದೇ ಪ್ರಾಥಮಿಕ ಮಾಹಿತಿಯಾಗಲಿ, ಹೆಚ್ಚಿನ ವಿವರವಾಗಲಿ ಇಲ್ಲದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಆದ್ದರಿಂದ ಈಗಲೇ ಅವರನ್ನು ಗರ್ಭಗುಡಿಯೊಳಗೆ ಪ್ರಧಾನ ಅರ್ಚಕರಾಗಿ ಪೂಜಾ ಕಾರ್ಯಕ್ಕೆ ಸೇರಿಸುವುದು ಬೇಡ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಕನಿಷ್ಠ ಒಂದು ತಿಂಗಳ ಕಾಲ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಹಾಗೂ ಆಶ್ರಯಿಗಳ ಮಾರ್ಗದರ್ಶನದಲ್ಲಿ ಇದ್ದು, ಇಲ್ಲಿನ ಪದ್ಧತಿಗಳನ್ನು ಅರಿತುಕೊಂಡ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿತ್ತು” ಎಂದರು.
​ಸಂಶಯ ಕಂಡುಬಂದಿತ್ತು:
“ಅವರು ಮಾತನಾಡುತ್ತಿದ್ದ ಶೈಲಿ ಹಾಗೂ ನೀಡುತ್ತಿದ್ದ ವಿವರಗಳಲ್ಲಿ ಸಾಕಷ್ಟು ಸುಳ್ಳು ಮಾಹಿತಿ ಇದೆ ಎಂಬ ಬಲವಾದ ಸಂಶಯ ನಮಗೆ ಆರಂಭದಲ್ಲೇ ಬಂದಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಅವರಿಗೂ ಕರೆ ಮಾಡಿ, ಅವರ ಹಿನ್ನೆಲೆ ಬಗ್ಗೆ ಕೂಲಂಕಷ ತನಿಖೆ ಹಾಗೂ ವಿಮರ್ಶೆ ನಡೆಸುವಂತೆ ತಿಳಿಸಿದ್ದೆವು. ಅವರು ವ್ಯಾಸಂಗ ಮಾಡಿದ್ದೇವೆ ಎಂದ ವಿದ್ಯಾಪೀಠ ಹಾಗೂ ಅವರ ಗುರುಗಳ ಬಗ್ಗೆಯೂ ನಾವೇ ಖುದ್ದಾಗಿ ಮಾಹಿತಿ ಕಲೆಹಾಕುತ್ತಿದ್ದೆವು. ಈ ನಡುವೆ ಅವರ ಬಗೆಗಿನ ನೈಜ ವಿಚಾರಗಳು ಬೆಳಕಿಗೆ ಬಂದ ತಕ್ಷಣವೇ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಅವರಿಗೆ ಕರೆ ಮಾಡಿ, ಯಾವುದೇ ಕಾರಣಕ್ಕೂ ಅವರನ್ನು ಪೂಜಾ ಕಾರ್ಯಕ್ಕೆ ಸೇರಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ” ಎಂದು ಕೆಮ್ಮಿಂಜೆ ತಂತ್ರಿಗಳು ವಿವರ ನೀಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading