Ad Widget

ಮನೆಯು ಸದ್ಗುಣಗಳನ್ನು ಬೆಳೆಸಿಕೊಳ್ಳುವ ತಾಣ

ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳು. ಅಂತಹ ಮೃದು ಹೃದಯಗಳಲ್ಲಿ ಉತ್ತಮ ಮೌಲ್ಯಗಳನ್ನು, ಸಮಾಜ ಬಯಸುವ ಉತ್ತಮ ಹೃದಯವಂತಿಕೆಯನ್ನು ತುಂಬಿ ಸಮಾಜದ ಸತ್ಪ್ರಜೆಗಳನ್ನಾಗಿ ಬೆಳೆಸುವ ಪ್ರಪ್ರಥಮ ಸ್ಥಳ ಮನೆ. ಅಂದರೆ ತಂದೆ ತಾಯಿ. ಮನೆ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುವ ಒಂದು ಸಾಮಾಜಿಕ ಸಂಸ್ಥೆಯಾಗಿದೆ. ಮಕ್ಕಳ ಪ್ರಾರಂಭಿಕ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ. ಈ ಕಲಿಕೆ ಮುಂದಿನ ಶಿಕ್ಷಣಕ್ಕೆ ಬುನಾದಿಯಾಗುತ್ತದೆ.

ಪೋಷಕರು ಮಕ್ಕಳ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಅರಿತುಕೊಂಡು ಅದಕ್ಕೆ ತಕ್ಕ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮಕ್ಕಳನ್ನು‌ ರಚನಾತ್ಮಕವಾಗಿ ಹೊಗಳುವ ಪ್ರಯತ್ನವನ್ನು ಮಾಡಬೇಕು. ಸಂತಸದ ವಿಚಾರಗಳನ್ನು ಹಂಚಿಕೊಳ್ಳುತ್ತಾ, ಅವರ ಸ್ನೇಹಿತರ ಬಗ್ಗೆ ಹಾಗೂ ಅವರಿಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತನಾಡುವ ಮೂಲಕ ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಟ್ಟು ಧನಾತ್ಮಕವಾಗಿ ಅಳವಡಿಸಿಕೊಳ್ಳುವಂತೆ ಪೋಷಕರು ಮಾರ್ಗದರ್ಶನ ನೀಡಬೇಕು.
ಮುಗ್ಧ ಮುದ್ದು ಮಕ್ಕಳು ಹೇಳಿದ ವಿಷಯವನ್ನು ಪದೇಪದೇ ಹೇಳುತ್ತಿದ್ದರು ಮೊದಲ ಸಲ ಕೇಳುವಂತೆ ಕುತೂಹಲದಿಂದ ಆಲಿಸಬೇಕು. ಅಂತೆಯೇ ಗತಿಸಿ ಹೋದ ಕಹಿ ನೆನಪುಗಳನ್ನು ಪದೇ ಪದೇ ಜ್ಞಾಪಿಸಬಾರದು. ಮಕ್ಕಳ ಉಪಸ್ಥಿತಿಯಲ್ಲಿ ಉಚಿತವಲ್ಲದ ಸಂಭಾಷಣೆಯನ್ನು ಮಾಡಲೇಬಾರದು. ಅವರು ಮಾಡಿದ ಪುಟ್ಟ ಸಾಧನೆಯನ್ನು ಹಬ್ಬದಂತೆ ಆಚರಿಸಿ ಅವರ ಮನಸ್ಸಿಗೆ ಖುಷಿ ತಂದುಕೊಡಬೇಕು. ಚಿಕ್ಕ ಮಕ್ಕಳು ಮಾತನ್ನು ಪ್ರಾರಂಭಿಸುವಾಗಲೇ ಬಾಯಿ ಮುಚ್ಚು ಎಂದು ತಡೆಯಬಾರದು. ನಾಯಕತ್ವದ ಅವಕಾಶಗಳನ್ನು ನೀಡಬೇಕು. ಹಾಗೆಯೇ ಅವರ ಜೊತೆಯಲ್ಲಿ ಸಾಗುತ್ತಾ ಹೆಜ್ಜೆ ಹೆಜ್ಜೆಗೂ ಆತ್ಮವಿಶ್ವಾಸ ತುಂಬಬೇಕು. ಇತರೆ ಮಕ್ಕಳ ಪ್ರಗತಿಯನ್ನು ಮುಂದಿಟ್ಟುಕೊಂಡು ತಮ್ಮ ಮಕ್ಕಳನ್ನು ಹೀಯಾಳಿಸುವುದು ಪೋಷಕರು ಮಾಡುವ ದೊಡ್ಡ ಪ್ರಮಾದ. ಮಕ್ಕಳ ಸಾಮಿಪ್ಯದಲ್ಲಿ ಪೋಷಕರು ಬೋರಾದಂತೆ ಲ, ಸುಸ್ತಾದಂತೆ ಕಾಣಿಸಿಕೊಳ್ಳಬಾರದು. ಲವಲವಿಕೆಯಿಂದ ಇರಲು ಪ್ರಯತ್ನಿಸಬೇಕು. ಅವರ ತಪ್ಪುಗಳನ್ನು ಹಂಗಿಸದೆ ಪ್ರೀತಿಯಿಂದ ಬುದ್ಧಿವಾದ ಹೇಳುತ್ತಾ ಅರ್ಥ ಮಾಡಿಸಿದರೆ ಮಗು ಅರ್ಥ ಮಾಡಿಕೊಳ್ಳುತ್ತದೆ. ಹಾಗೆಯೇ ಪೋಷಕರು ಮಕ್ಕಳ ಮಕ್ಕಳಿರುವಾಗ ಯಾವುದೇ ಕಾರಣಕ್ಕೂ ಕಿತ್ತಾಡಬಾರದು. ಸಾಮರಸ್ಯದ ಕೊರತೆ ಇದ್ದರೆ ತಾವಾಗಿಯೇ ಬಗೆಹರಿಸಿಕೊಳ್ಳಬೇಕು.
ಮಕ್ಕಳಿಗೆ ಕೂಡು ಕುಟುಂಬದ ವಾತಾವರಣ ಇತ್ತೀಚಿನ ಕಾಲದಲ್ಲಿ ಸಿಗದ ಕಾರಣ ಹಿರಿಯರಿಂದ ಸಿಗುವ ನೀತಿ ಕಥೆಗಳು, ಬುದ್ಧಿ ಮಾತುಗಳು ಕಡಿಮೆ ಎಂದೇ ಹೇಳಬಹುದು. ಹಾಗಾಗಿ ಟಿವಿ ಮೂಲಕ ಅಥವಾ ಮೊಬೈಲ್ ಮೂಲಕ ಗೇಮ್ಸ್ ಗೆ ಅವಕಾಶ ಕೊಡುವ ಬದಲು ಆದಷ್ಟು ನೀತಿ ಕಥೆ, ಸಂಸ್ಕೃತಿ ಆಧಾರಿತ ಕಾರ್ಯಕ್ರಮಗಳನ್ನು ಅರಿತುಕೊಳ್ಳಲು ಅವಕಾಶ ನೀಡಬೇಕು.
ಮಕ್ಕಳು ತಾಯಿಯ ಮಮತೆಯ ಮುದ್ದು ಮಾತುಗಳಿಂದ ಹಾಗೂ ತಂದೆ ನೀಡುವ ಕಾಳಜಿಯಿಂದ ಮುಂದಿನ ಬದುಕಿಗೆ ಬೇಕಾಗುವ ಸದ್ಗುಣಗಳನ್ನು ಕಲಿತುಕೊಳ್ಳುತ್ತಾರೆ ಹಾಗೂ ಕೌಶಲಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಮನೆ ಮಕ್ಕಳಲ್ಲಿ ಸಂಸ್ಕೃತಿ ಹಾಗೂ ಮೌಲ್ಯಗಳು ಬೆಳೆಸುವ ವಾತಾವರಣವಾಗಿದೆ. ಮಕ್ಕಳನ್ನು ಬೆಳೆಸಲು ಯಾವುದೇ ವಿಜ್ಞಾನದ ಸೂತ್ರಗಳು ಸಹಾಯ ಮಾಡಲಾರವು. ಅಮ್ಮ ನೀಡುವ ಕೈ ತುತ್ತು, ಅಪ್ಪನ ಅಮೃತ ನುಡಿಗಳು, ವಿಶ್ವಾಸ ಪೂರಿತ ಮಾರ್ಗದರ್ಶನಗಳು ತುಂಬಾ ಪರಿಣಾಮಕಾರಿ. ಮಕ್ಕಳು ಸನ್ನಡತೆ, ಧೈರ್ಯ, ಸಾಹಸ, ವಿವೇಕ, ವಿದ್ಯೆಗಳನ್ನು ಮೊದಲು ಮನೆಯಿಂದಲೇ ಕಲಿಯುತ್ತಾರೆ. ಹಾಗೆಯೇ ಅಧೈರ್ಯ, ಅವಿವೇಕ, ಮತ್ಸರಗಳಂತ ಋಣಾತ್ಮಕ ಗುಣಗಳನ್ನು ಸಹ ಮನೆಯಿಂದಲೇ ಕಲಿಯುತ್ತಾರೆ. ಹಾಗಾಗಿ ಮನೆಯ ಶಿಕ್ಷಣದಲ್ಲಿ ಎಡವಟ್ಟು ನಡೆಯಲೇಬಾರದು.

ಮಕ್ಕಳ ಮನಸ್ಸು ಹೂವಿನ ಹಾಗೆ. ಅವು ಬಾಡಿ ಹೋಗದಂತೆ, ಮುದುಡಿ ಹೋಗದಂತೆ ನೀರೆರೆದು ಪೋಷಿಸಬೇಕು. ಮನೆಯಲ್ಲಿ ಶಾಂತ ಪರಿಸರವನ್ನು ನಿರ್ಮಿಸಿ ಕೊಡಬೇಕು. ಅದು ಮಕ್ಕಳ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ತಂದೆ- ತಾಯಿಯರ ಪ್ರೀತಿಯ ಸಾಂಗತ್ಯ ಮಕ್ಕಳಲ್ಲಿ ಮನೋಬಲವನ್ನು ಹೆಚ್ಚಿಸುತ್ತದೆ. ಇದರಿಂದ ಮಕ್ಕಳು ಸತ್ಪ್ರಜೆಯಾಗುವುದರಲ್ಲಿ ಸಂದೇಹವಿಲ್ಲ.

ಶ್ರೀಮತಿ ಅಕ್ಷತಾ ಕೇಶವ್, ಕಡ್ಯದ
ಸಹಶಿಕ್ಷಕಿ
ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ, ಕಾಟಿಪಳ್ಳ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!