ಜ. 28ರಂದು ಬೆಳಗ್ಗೆ ಮೂರುಕಲ್ಲಡ್ಕ ದೈವಸ್ಥಾನದಿಂದ ಸಪರಿವಾರ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಗಳ ಕಿರುವಾಲು, ತೋಟದ ಮೂಲೆ ಸ್ಥಾನದಿಂದ ರುದ್ರಚಾಮುಂಡಿ ದೈವದ ಕಿರುವಾಲು ಹೊರಡುವ ಕಾರ್ಯಕ್ರಮ ನೆರವೇರಿತು. ಬಳಿಕ ಕಳಂಜ ಗ್ರಾಮದ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ಏರುವುದು, ನರ್ತನ ಸೇವೆ, ಬಟ್ಟಲು ಕಾಣಿಕೆ, ಸಿರಿಮುಡಿ ಗಂಧಪ್ರಸಾದ ವಿತರಣೆ ನಡೆಯಿತು.
ಬಳಿಕ ಪರಿವಾರ ದೈವಗಳಾದ ಕೊಡಮಣಿತ್ತಾಯ, ಕೊಲ್ಲಿಕುಮಾರ, ಪುರುಷ ದೈವ, ಮೈಸಂದಾಯ ದೈವಗಳ ಕಟ್ಟುಕಟ್ಟಳೆಯ ನೇಮ, ಬೂಳ್ಯ ವಿತರಣೆ ನಡೆಯಿತು.
ನಂತರ ಪೂ. 11:30 ರಿಂದ ರುದ್ರಚಾಮುಂಡಿ ದೈವದ ನರ್ತನ ಸೇವೆ, ಬೂಳ್ಯ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ವಿಶ್ರಾಂತ ಅಧ್ಯಾಪಕರಾದ ಸದಾಶಿವ ಭಟ್ ಜೋಗಿಬೆಟ್ಟು ಭಾಗವಹಿಸಲಿದ್ದಾರೆ. ಸಂಸದ ನಳೀನ್ ಕುಮಾರ್ ಕಟೀಲು, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ಭಾಗವಹಿಸಲಿದ್ದಾರೆ. ಸಂಜೆ 7.00ರಿಂದ ಪ್ರಸಿದ್ಧ ಕಲಾವಿದರ ಕೊಡುವಿಕೆಯಲ್ಲಿ ಮರ್ಯಾದಾ ಪುರುಷೋತ್ತಮ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 9:00 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಜ. 29ರಂದು ಬೆಳಿಗ್ಗೆ 7.30 ಕ್ಕೆ ತಂಟೆಪಾಡಿ ಶಿರಾಡಿ ದೈವದ ಭಂಡಾರ ಹೊರಡುವುದು, ಬೆಳಿಗ್ಗೆ 8.00ಕ್ಕೆ ಕಳಂಜ ಗುತ್ತಿನಿಂದ ಧೂಮಾವತಿ ದೈವದ ಬಂಡಾರ ಹೊರಡುವುದು ಮತ್ತು ಮೂರುಕಲ್ಲಡ್ಕ ದೈವಸ್ಥಾನದಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಟು ಕಲ್ಲಮಾಡದಲ್ಲಿ ಮೂರು ದೈವಗಳ ಕಾಲಾವಧಿ ನೇಮ(ತಿರ್ತನೇಮೊ), ಬೂಳ್ಯ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ 2.30ರಿಂದ ಕಲ್ಲಮಾಡದಲ್ಲಿ ಶಿರಾಡಿ ದೈವದ ದೊಂಪದ ಬಲಿನೇಮ ನಡೆದು ಮಾರಿ ಹೊರಡಲಿದೆ. ಸಂಜೆಯ ವೇಳೆ ಬೆಳ್ಳಾರೆ ಸಮೀಪದ ತಂಬಿನಮಕ್ಕಿಯಲ್ಲಿ ಗೌರಿಹೊಳೆಯ ಸಮೀಪ ಬಲಿಸಮರ್ಪಣೆಯಾಗಿ ನಾಲ್ಕು ದಿನಗಳ ಅಯ್ಯನಕಟ್ಟೆ ಜಾತ್ರೆ ಸಂಪನ್ನಗೊಳ್ಳಲಿದೆ.