ಸುಬ್ರಹ್ಮಣ್ಯ, ಜ.26: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ದೇವೇಗೌಡ ಭೇಟಿ ನೀಡಿದರು.
ಆರಂಭದಲ್ಲಿ ಶ್ರೀ ದೇವಳದ ಆದಿಶೇಷ ವಸತಿಗೃಹಕ್ಕೆ ಆಗಮಿಸಿದ ಮಾಜಿ ಪ್ರಧಾನಿಗಳನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ ಪುಷ್ಪಗುಚ್ಚ ನೀಡಿ ಬರಮಾಡಿಕೊಂಡರು.
ಬಳಿಕ ಅವರು ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ಸೇವೆ ನೆರವೇರಿಸಿ ಮೃತ್ತಿಕಾ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕರು ಮಾಜಿ ಪ್ರಧಾನಿಗಳಿಗೆ ಶಾಲು ಹೊದಿಸಿ ಪ್ರಸಾದ ನೀಡಿದರು. ನಂತರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಮಾಜಿ ಪ್ರಧಾನಿಗಳಿಗೆ ಭವ್ಯ ಸ್ವಾಗತ ನೀಡಲಾಯಿತು. ಶ್ರೀ ದೇವಳದ ಗೋಪುರದ ಬಳಿ ಮಂಗಳವಾದ್ಯದ ಮೂಲಕ ಶ್ರೀ ದೇವಳಕ್ಕೆ ಮಾಜಿ ಪ್ರಧಾನಿಗಳನ್ನು ಕರೆದೊಯ್ಯಲಾಯಿತು. ಶ್ರೀ ದೇವಳದ ಆನೆ ಯಶಸ್ವಿಯು ಎಚ್.ಡಿ.ದೇವೇಗೌಡರನ್ನು ತನ್ನ ಸೊಂಡಿಲಿನಿಂದ ಆಶೀರ್ವದಿಸಿತು. ಅಲ್ಲದೆ ಮಾಜಿ ಪ್ರಧಾನಿಗಳನ್ನು ವಿಶೇಷವಾಗಿ ಸ್ವಾಗತಿಸಿತು. ನಂತರ ಶ್ರೀ ದೇವರ ದರುಶನ ಮಾಡಿದ ಅವರಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಅವರು ಹೊಸಳಿಗಮ್ಮನ ದರುಶನ ಪಡೆದರು.ಪುರೋಹಿತರು ಅವರಿಗೆ ಕುಂಕುಮಾರ್ಚನೆಯ ಪ್ರಸಾದ ನೀಡಿದರು.
ಈ ಸಂದರ್ಭ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ವನಜಾ ವಿ.ಭಟ್, ಶೋಭಾ ಗಿರಿಧರ್, ಎಇಒ ರಾಜಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ಸುಬ್ರಹ್ಮಣ್ಯ ಜೆಡಿಎಸ್ ಅಧ್ಯಕ್ಷ ಕಿಶೋರ್ ಅರಂಪಾಡಿ, ಜೆಡಿಎಸ್ ಮುಖಂಡರಾದ ಜಾಕೆ ಮಾಧವ ಗೌಡ,ಸಯ್ಯದ್ ಮೀರಾ ಸಾಹೇಬ್, ಡಾ.ತಿಲಕ್ ಎ.ಎ., ಎಂ.ಪಿ.ದಿನೇಶ್ ಮಾಸ್ಟರ್ ಉಪಸ್ಥಿತರಿದ್ದರು.
ಇಂದು ಆಶ್ಲೇಷ ಬಲಿ ಮತ್ತು ಮಹಾಪೂಜೆ:
ಶ್ರೀ ದೇವರ ದರುಶನ ಮಾಡಿದ ಬಳಿಕ ಆದಿಶೇಷ ಗೆಸ್ಟ್ ಹೌಸ್‌ಗೆ ಆಗಮಿಸಿದ ಮಾಜಿ ಪ್ರಧಾನಿಗಳು ಸುಮಾರು ಒಂದು ಗಂಟೆಗಳ ಕಾಲ ಪಾರಾಯಣ ಶ್ಲೋಕ ವಾಚಿಸಿದರು. ಬಳಿಕ ಶ್ರೀ ದೇವಳದಲ್ಲಿ ರಾತ್ರಿಯ ಪ್ರಸಾದ ಬೋಜನ ಸ್ವೀಕರಿಸಿದರು.
ಇಂದು (ಶನಿವಾರ) ಬೆಳಗ್ಗೆ ಶ್ರೀ ದೇವಳದಲ್ಲಿ ಮಾಜಿ ಪ್ರಧಾನಿಗಳು ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ನೆರವೇರಿಸಲಿದ್ದಾರೆ.ಬಳಿಕ ಮದ್ಯಾಹ್ನದ ಮಹಾಪೂಜೆ ವೀಕ್ಷಿಸಿ ಮಹಾಪೂಜಾ ಸೇವೆ ನೆರವೇರಿಸಲಿದ್ದಾರೆ.ಬಳಿಕ ಮದ್ಯಾಹ್ನದ ಪ್ರಸಾದ ಬೋಜನ ಸ್ವೀಕರಿಸಿಲಿದ್ದಾರೆ. ನಂತರ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಿರ್ಮಿಸಿದ ಹೆಲಿಪ್ಯಾಡ್‌ಗೆ ತೆರಳಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.