
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ‘ಕಾಂಗ್ರೆಸ್ ಪಕ್ಷಕ್ಕೆ ದ್ರೋಹವಾಗಿದೆ’, ಈ ನಾಯಕಿಯವರನ್ನು ಪಕ್ಷದಿಂದ ಅಮಾನತು ಮಾಡುತ್ತಾರಾ ? ಎಂದು ಪ್ರಶ್ನೆ ಮಾಡಿದರು.
‘ಕಾಂಗ್ರೆಸ್ ಪಕ್ಷಕ್ಕೆ ದ್ರೋಹವಾಗಿದೆ’- ಗೋಕುಲ್ ದಾಸ್ ಕೆ. :
ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆ ಕಾಂಗ್ರೆಸ್ ಪಕ್ಷಗಳ ನಾಯಕಿಯರು ತಮ್ಮ ಅಧಿಕಾರದ ಲಾಲಸೆಗಾಗಿ ಪಕ್ಷದ ತತ್ವ ಆದರ್ಶಗಳನ್ನು ಬದಿಗೊತ್ತಿ ಅಧಿಕಾರಕ್ಕಾಗಿ ಬಿಜೆಪಿ ನಾಯಕಿಯರ ಜೊತೆ ಹೊಂದಾಣಿಕೆ ಮಾಡಿಕೊಂಡು ಮಹಿಳಾ ಸೊಸೈಟಿಯಲ್ಲಿ ಅವಿರೋಧ ಆಯ್ಕೆ ಮಾಡಿ ಸೊಸೈಟಿ ಅಧಿಕಾರವನ್ನು ಗಳಿಸಿ ತಮ್ಮ ಪಕ್ಷದ ಪ್ರಮುಖ ನಾಯಕರ ಪತ್ನಿಯರನ್ನು ನಿಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗೋಕುಲ್ ದಾಸ್ ಕೆ. ಹೇಳಿದ್ದಾರೆ.
“ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷ ವಿರೋಧಿ ಕೆಲಸ ಮಾಡದೆ, ಪಕ್ಷಕ್ಕಾಗಿ ಮನೆ ಮನೆಗೆ ಬೇಟಿ ನೀಡಿ ಮತಯಾಚನೆ ಮಾಡಿದ ಪ್ರತಿಕ್ಷಣ ಪಕ್ಷದ ಕಾರ್ಯಗಳಲ್ಲಿಯೆ ತೊಡಗಿಸಿಕೊಂಡಿರುವ ನಮ್ಮ ಪ್ರಮುಖ ೫ ಜನರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆ ಪಕ್ಷದಿಂದ ಅಮಾನತು ಮಾಡಿ, ನಮಗೆ ಕಳಂಕ ತಂದಿರುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆಯಿದ್ದುದರಿಂದ ಈ ಅಮಾನತು ಆದೇಶವನ್ನು ವಾಪಾಸು ಪಡೆದಿದ್ದಾರೆ”.
“ಆದರೆ ಅದೇ ನಾಯಕರು ಈ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭವಿಸುವುದು ಎಷ್ಟು ಸರಿ? ಇದಕ್ಕೆ ಪಕ್ಷದ ನಾಯಕರು ಏನು ಕ್ರಮ ತೆಗೆದುಕೊಳ್ಳುತ್ತಾರೆ? ಇವರನ್ನು ಪಕ್ಷದಿಂದ ಅಮಾನತು ಮಾಡುತ್ತಾರಾ? ಹೀಗೆ ಎಲ್ಲಾ ತಳಮಟ್ಟದ ಚುನಾವಣೆ, ಸೊಸೈಟಿಗಳಲ್ಲಿ ಈ ನಾಯಕರು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕೀಯ ಮಾಡುವುದಾದರೆ ಕಾರ್ಯ ಕರ್ತರು ಮುಂದಿನ ಚುನಾವಣೆಯಲ್ಲಿ ಯಾವ ಆಧಾರದಲ್ಲಿ ಪಕ್ಷಕ್ಕೆ ಮತಯಾಚನೆ ಮಾಡಬೇಕು?” ಎಂದು ಅವರು ಪ್ರಶ್ನಿಸಿದರು.
“ಇತ್ತೀಚೆಗೆ ಸುಳ್ಯ ಸಿ ಎ ಬ್ಯಾಂಕ್ ಚುನಾವಣೆಗೆ ೧೩ಕ್ಕೆ ೧೩ ಅಭ್ಯರ್ಥಿಗಳನ್ನು ಸಹಕಾರಿ ರಂಗದಿಂದ ಕಣಕ್ಕಿಲಿಸಿ ನ್ಯಾಯಯುತ, ಸೈದ್ಧಾಂತಿಕ ಹೋರಾಟ ನಡೆಸಿzವೆ. ಇದು ಎಲ್ಲಾ ಸೊಸೈಟಿಗಳಿಗೂ ಅನ್ವಯವಾಗಬೇಕು. ಸೋಲು ಗೆಲುವು ಇದ್ದದು, ಆದರೆ ಹೊಂದಾಣಿಕೆ ರಾಜಕೀಯವನ್ನು ನಾವು ಖಂಡಿಸುತ್ತೇವೆ.”
“ಸುಬ್ರಹ್ಮಣ್ಯ ಮಹಿಳಾ ಸೊಸೈಟಿಯಲ್ಲಿ ನಮ್ಮ ಪಕ್ಷದ ಮಹಾನ್ ನಾಯಕಿಯರು, ನಾಯಕರ ಪತ್ನಿಯರು ನಾಮ ಪತ್ರ ಸಲ್ಲಿಸಿರುವುದು ಆದರೆ ಇವರು ಯಾಕೆ ಸೈದ್ಧಾಂತಿಕ ಹೋರಾಟ ನಡೆಸುವುದಿಲ್ಲ? ಕೇವಲ ಅಧಿಕಾರದ ಆಸೆಗಾಗಿ ಪಕ್ಷದ ಕಾರ್ಯಕರ್ತರ ಬದ್ಧತೆಯನ್ನು ನಿರ್ನಾಮ ಮಾಡಬಾರದು” ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ “ಕೆ.ಡಿ.ಪಿ ಅಕ್ರಮ ಸಕ್ರಮ ಸಮಿತಿ ರಚನೆಯಾಗಿದೆ. ನಮ್ಮ ಸರಕಾರ ಭ್ರಷ್ಟಾಚಾರ ಮುಕ್ತ ಸರಕಾರವಾಗಿದೆ. ಮುಖ್ಯ ಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಯವರ ಆಶಯದಂತೆ ನಮ್ಮ ಯಾವುದೇ ಅಧಿಕಾರಿಗಳು ಹಾಗೂ ಸಮಿತಿಗಳ ಸದಸ್ಯರು ನಾಯಯುತವಾಗಿ ಕಾರ್ಯನಿರ್ವಹಿಸಬೇಕು, ಯಾರಾದರೂ ಭ್ರಷ್ಟಾಚಾರದಲ್ಲಿ ತಮ್ಮ ಕಾರ್ಯನಿರ್ವಹಿಸಿರುವುದು ಕಂಡುಬAದರೆ ನಮ್ಮ ಗಮನಕ್ಕೆ ತನ್ನಿ” ಎಂದವರು ಹೇಳಿದರು.
“ಬೆಳ್ಳಾರೆ ಸಿ ಎ ಬ್ಯಾಂಕ್‌ನಲ್ಲಿ ಅಧ್ಯಕ್ಷೆ ಹುದ್ದೆ ಸಿಗದೆ ಇದ್ದಾಗ ಶ್ರೀಮತಿ ರಾಜೀವಿ ರೈಯವರು ಬಿಜೆಪಿ ಜೊತೆ ಸೇರಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸಡ್ಡು ಹೊಡೆಯುವ ಕಾರ್ಯ ಮಾಡಿದ್ದಾರೆ. ಈಗಲೂ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿದ್ದಾರೆ ಇದು ಸರಿಯಲ್ಲ” ಎಂದು ಪೆರುವಾಜೆ ಗ್ರಾ.ಪಂ. ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆನಂದ ಬೆಳ್ಳಾರೆ ಉಪಸ್ಥಿತರಿದ್ದರು.