*ಪೆರುವಾಜೆ*: ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಶ್ರೀ ದೇವರ ಪೇಟೆ ಸವಾರಿ ನಡೆಯಿತು.
ದೇವಸ್ಥಾನದ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ದೇವರು ಬಲಿ ಹೊರಟು ಉತ್ಸವದ ಸಂದರ್ಭದಲ್ಲಿ ಶ್ರೀ ಉಳ್ಳಾಕುಲು ದೈವದ ಭಂಡಾರ ಬಂದು ದೇವರನ್ನು ಎದುರುಗೊಂಡಿತು. ಆ ಬಳಿಕ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ನಡೆಯಿತು. ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ಪಲ್ಲ ಪೂಜೆ ನೆರವೇರಿತು.
ಹರಿದು ಬಂದ ಭಕ್ತರ ದಂಡು
ದರ್ಶನ ಬಲಿ, ಬಟ್ಟಲು ಕಾಣಿಕೆ ಹಿನ್ನೆಲೆಯಲ್ಲಿ ತಾಲೂಕು, ಹೊರ ತಾಲೂಕಿನ ಮೂಲೆ ಮೂಲೆಯಿಂದ ಭಕ್ತರ ದಂಡೇ ಹರಿದು ಬಂತು. ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ಬೀಕರಿಸಿದರು. ಬ್ರಹ್ಮರಥದ ಪರಿಕಲ್ಪನೆಯಂತೆ ಹೂವಿನ ಅಲಂಕಾರದಿಂದ ಶೃಂಗಾರಗೊಂಡಿದ್ದ ದೇವಾಲಯ ಭಕ್ತರ ಗಮನ ಸೆಳೆಯಿತು.ಸಾಂಸ್ಕೃತಿಕ ವೇದಿಕೆಯಲ್ಲಿ ಬಾಲಕೃಷ್ಣ ನೆಟ್ಟಾರು ತಂಡದಿಂಡ ಭಕ್ತಿ ರಸಮಂಜರಿ ನಡೆಯಿತು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಜಿ.ಪಂ.ಮಾಜಿ ಸದಸ್ಯರಾದ ಎಸ್. ಎನ್. ಮನ್ಮಥ, ಆಶಾ ತಿಮ್ಮಪ್ಪ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್., ಮಾಜಿ ಅಧ್ಯಕ್ಷರಾದ ಉಮೇಶ್ ಕೆಎಂಬಿ, ನಿರಂಜನ ಶೆಟ್ಟಿ ಪಾಲ್ತಾಡು ಭಕ್ತಾದಿಗಳು ಉಪಸ್ಥಿತರಿದ್ದರು.