
ಮನ ಸೆಳೆದ ಕಲಾ ವೈಭವ : ಮೂರುವರೆ ಕಿ.ಮೀ.ದೂರ ಸಾಗಿದ ಮೆರವಣಿಗೆ
ಪೆರುವಾಜೆ: ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಮಂಗಳವಾರ ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರಕ್ಕೆ ತನಕ ವೈಭವದ ಹಸುರು ಹೊರೆಕಾಣಿಕೆ ನಡೆಯಿತು.
ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಮುಂಭಾಗದಿಂದ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಚಾಲನೆ ನೀಡಿದರು. ಸುಮಾರು ಮೂರುವರೆ ಕಿ.ಮೀ.ದೂರ ಮೆರವಣಿಗೆ ಸಾಗಿತು.
ಇಡೀ ಮೆರವಣಿಗೆಯಲ್ಲಿ ಕಲಾ ವೈಭವ ಮೇಳೈಸಿತು. ಪ್ರಚಾರ ವಾಹನ, ಪೂರ್ಣ ಕುಂಭದ ಕಲಶ ಹೊತ್ತ ಮಹಿಳೆಯರು, ಅಲಂಕಾರಿಕ ಬಣ್ಣದ ಕೊಡೆಗಳು, ಚೆಂಡೆ, ಅಯೋಧ್ಯೆಯ ರಾಮಮಂದಿರವನ್ನು ಸಾರುವ ಜಾಥಾ ವಾಹನ, ಕುಣಿತ ಭಜನೆ, ಧಾರ್ಮಿಕತೆಯನ್ನು ಸಾರುವ ಮಕ್ಕಳ ವಿವಿಧ ವೇಷಗಳು, ನವದುರ್ಗೆಯರು, ಗೊಂಬೆ ವೇಷ, ಪಿಲಿವೇಷ, ಹಸುರು ಹೊರೆಕಾಣಿಕೆ ಹೊತ್ತ ವಾಹನಗಳು, ಭಕ್ತರು ಮೆರವಣಿಗೆಗೆ ಮೆರಗು ತುಂಬಿದರು. ನೂರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಮುನ್ನಡೆದರು.
ಈ ಸಂದರ್ಭದಲ್ಲಿ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್., ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮಾಜಿ ಸದಸ್ಯಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಉಮೇಶ್ ಕೊಟ್ಟೆಕಾಯಿ, ಕ್ಷೇತ್ರದ ಕಚೇರಿ ವ್ಯವಸ್ಥಾಪಕ ವಸಂತ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.



