ಜ.೧೨ ರಂದು ಬಳ್ಪ ಶಾಲಾ ಆವರಣದಲ್ಲಿ ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ-ಕೇನ್ಯ, ಗ್ರಾಮೋತ್ಸವ ಸಮಿತಿ ಆಶ್ರಯದಲ್ಲಿ ನಡೆದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಂಸದರ ಆದರ್ಶ ಗ್ರಾಮ ಬಳ್ಪದ ಗ್ರಾಮೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಮತ್ತು ೮ ಕೋಟಿ ರೂ.ವೆಚ್ಚದ ಆರು ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯನ್ನೂದ್ದೇಶಿಸಿ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಸರಕಾರದ ಅನುದಾನ, ಜನಪ್ರತಿನಿಧಿ, ಸ್ಥಳೀಯಾಡಳಿತ, ಕಂಪೆನಿಗಳ ಸಿ.ಎಸ್.ಆರ್. ಅನುದಾನ ತಂದು ನಳಿನ್ ಕುಮಾರ್ ಕಟೀಲ್ ಗ್ರಾಮಸ್ಥರ ಕಲ್ಪನೆಯಂತೆ ಕೆಲಸ ಮಾಡಿದ್ದಾರೆ.ಇಲ್ಲಿನ ಅಭಿವೃದ್ಧಿ ಕೆಲಸ ಇಲ್ಲಿಗೆ ಮಾತ್ರ ಸೀಮಿತವಾಗದೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಬೇಕು.ಮುಂದೆ ದೇಶದ ಗ್ರಾ.ಪಂ.ಸದಸ್ಯರು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತಾಗಬೇಕು”
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬಳ್ಪ ಗ್ರಾ.ಪಂ.ನ್ನು ಆಯ್ಕೆ ಮಾಡಿಕೊಂಡು ವಿವಿಧ ಅನುದಾನಗಳನ್ನು ಬಳಸಿ ಗ್ರಾ.ಪಂ. ವ್ಯಾಪ್ತಿಯ ಮೂಲಭೂತ ಸೌಕರ್ಯಗಳ ಕೆಲಸ ಮಾಡಿ ದೊಡ್ಡ ಮಟ್ಟದ ಅಭಿವೃದ್ಧಿ ಕೆಲಸ ಮಾಡಿರುವ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನಾರ್ಹರು ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವ ಭಗವಂತ್ ಖೂಬಾ ಹೇಳಿದರು.
ಸಂಸದರಿಗೆ ಮಾತ್ರ ಅಲ್ಲ, ಜನಸೇವೆ, ಅಭಿವೃದ್ಧಿ ಮಾಡುವ ಕಳಕಳಿ ಇರುವ ಎಲ್ಲಾ ಜನಪ್ರತಿನಿಧಿಗಳಿಗೆ ಆದರ್ಶ ಗ್ರಾಮ ಬಳ್ಪ ಮಾದರಿಯಾಗಿದೆ. ಕಲ್ಪನೆಗೂ ಮೀರಿದ ಅಭಿವೃದ್ಧಿಯನ್ನು ಇಲ್ಲಿ ಮಾಡಲಾಗಿದೆ ಎಂದು ಹೇಳಿದ ಸಚಿವ ಖೂಬ, ಸಮಾಜದ ಸರ್ವ ತೋಮುಖ ಅಭಿವೃದ್ಧಿ ಆಗಬೇಕು, ಧರ್ಮ ರಹಿತ, ಜಾತಿ ರಹಿತ ಲಿಂಗ ಭೇದ ರಹಿತವಾಗಿ ಯುವಜನತೆ, ಮಹಿಳೆಯರ ಅಭಿವೃದ್ಧಿ ಆಗಬೇಕು ಎಂದು ಕನಸು ಕಂಡವರು ನರೇಂದ್ರ ಮೋದಿಯವರು.ವಿಶ್ವ ನಾಯಕನಾಗಿ ಬೆಳೆದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬಡವರಿಗೆ ಸೌಲಭ್ಯಗಳು ನೇರವಾಗಿ ತಲುಪಿ ಬಡವರ ಬದುಕು ಹಸನಾಗುವಂತಾಗಿದೆ.ಮೋದಿ ಅವರ ಆಡಳಿತದ ಅವಧಿಯಲ್ಲಿ ರೈಲ್ವೇ, ರಸ್ತೆ, ವಿಮಾನ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ದೇಶ ಅಭಿವೃದ್ಧಿಯ ನಾಗಾಲೋಟ ಕಂಡಿದೆ ಎಂದು ಹೇಳಿದರು.
ಬಳ್ಪದಲ್ಲಿ ಆದರ್ಶದ ಬೆಳಕು ಮೂಡಿದೆ-ಒಡಿಯೂರುಶ್ರೀ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕೃಷಿ ಮತ್ತು ಋಷಿ ಪ್ರಧಾನವಾಗಿರುವ ಕಡೆ ಬೆಳವಣಿಗೆ ಆಗುತ್ತದೆ.ಇಂದು ಜಾಗತೀಕರಣದ ಜೊತೆಗೆ ಭಾರತೀಯತೆಯೂ ಇದ್ದಾಗ ಮಾತ್ರ ನಮ್ಮತನ ಉಳಿಯುತ್ತದೆ. ಗ್ರಾಮ ವಿಕಾಸದಿಂದಲೇ ರಾಷ್ಟ್ರವಿಕಾಸ. ವ್ಯಕ್ತಿ ವಿಕಾಸದಿಂದ ಗ್ರಾಮವಿಕಾಸ. ಬಳ್ಪ ಗ್ರಾಮದಲ್ಲಿ ಈಗ ಆದರ್ಶದ ಬೆಳಕು ಮೂಡಿದೆ” ಎಂದರು.
ರಾಜ್ಯದ ಮಾದರಿ ಗ್ರಾಮ ಬಳ್ಪ-ಕೋಟ: ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ರಾಜ್ಯದ ಮಾದರಿ ಗ್ರಾಮ ಪಂಚಾಯತ್ ಬಳ್ಪ ಎಂದರು.ಶಿರಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ ಆಗಬೇಕು.ಅದು ನಳಿನ್ ಕುಮಾರ್ ಕಟೀಲ್ ಅವಧಿಯಲ್ಲಿಯೇ ಅಗಬೇಕು” ಎಂದವರು ಆಶಿಸಿದರು.
ಕೆಲಸದ ಮೂಲಕ ಆದರ್ಶರಾಗಬೇಕು-ಎಸ್.ಅಂಗಾರ: ಮಾಜಿ ಸಚಿವ ಎಸ್.ಅಂಗಾರ ಮಾತನಾಡಿ, ಆದರ್ಶ ಎಂಬುದು ಪ್ರಚಾರದ ವಸ್ತುವಾಗಿರಬಾರದು.ಅದು ನಮ್ಮ ನಡೆ, ನುಡಿಯಲ್ಲಿ ಬದುಕಿನಲ್ಲಿ ಇರಬೇಕು.ನಮ್ಮ ಕೆಲಸದ ಮೂಲಕ ಆದರ್ಶರಾಗಬೇಕು ಎಂದರು.
ದ.ಕ.ಸAಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ,ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್,ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಬಳ್ಪ ಗ್ರಾಮದ ಬಡವರಿಗೆ ೫ ಮನೆಗಳನ್ನು ಕಟ್ಟಿಸಿ ಕೊಟ್ಟ ದಾನಿ ಬಂಟ್ವಾಳದ ರೋನ್ ರೋಡ್ರಿಗಸ್ ಲಂಡನ್, ಎಂ.ಆರ್.ಪಿ.ಎಲ್.ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣರಾಜ್ ಹೆಗ್ಡೆ, ಬಳ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ವಿನೋದ್ ಬೊಳ್ಮಲೆ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಬುಡೆಂಗಿ,ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ರೈ ಬಿರ್ಕಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,ಬಳ್ಪ ಗ್ರಾಮ ಪಂಚಾಯತ್ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಸದಸ್ಯ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು. ಬಾಲಕೃಷ್ಣ ರೈ ಬಿರ್ಕಿ ವಂದಿಸಿದರು. ದೇವದಾಸ ರೈ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ರಿಗೆ ಸನ್ಮಾನ, ಅಭಿನಂದನೆ
ಕೇಂದ್ರ ಸಚಿವ ಭಗವಂತ್ ಖೂಬಾ, ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು. ಎಂಆರ್‌ಪಿಎಲ್ ಗ್ರೂಪ್ ಜನರಲ್ ಮೆನೇಜರ್ ಕೃಷ್ಣ ಹೆಗ್ಡೆ, ಆದರ್ಶ ಗ್ರಾಮದಲ್ಲಿ ತಲಾ ೫ ಲಕ್ಷ ರೂ.ಗಳ ೫ ಮನೆ ನಿರ್ಮಾಣ ಮಾಡಿ ಕೊಟ್ಟ ರೋನ್ ರೊಡ್ರಿಗಸ್,ಗ್ರಾಮದಲ್ಲಿ ವಿವಿಧ ನಿರ್ಮಾಣ ಕಾಮಗಾರಿ ಮಾಡಿದ ಮೊಗ್ರೋಡಿ ಕನ್‌ಸ್ಟ್ರಕ್ಷನ್ ಹಾಗೂ ಬೋಗಾಯನಕೆರೆ ಅಭಿವೃದ್ಧಿ ಪಡಿಸಿದ ಗುತ್ತಿಗೆದಾರರನ್ನು ಅಭಿನಂದಿಸಲಾಯಿತು. ಆಯುರ್ವೇದ ವೈದ್ಯ ಡಾ.ರಾಮಕೃಷ್ಣ ಭಟ್ ದೇವಸ್ಯ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್ಲು, ರಾಷ್ಟ್ರೀಯ ಯೋಗಪಟು ಹಾರ್ದಿಕ ಕೆರೆಕೋಡಿ, ರಾಷ್ಟ್ರೀಯ ಕ್ರೀಡಾಪಟು ಜಶ್ಮಿತ ಕೊಡೆಂಕಿರಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅನುಶ್ ಎ.ಎಲ್, ಮಹತಿ ಬಿ, ಎಂ.ಬಿ.ಬಿ.ಎಸ್‌ನಲ್ಲಿ ಚಿನ್ನದ ಪದಕ ಪಡೆದ ಪ್ರಿಯಾಂಕ ರೈ ಅವರನ್ನು ಸನ್ಮಾನಿಸಲಾಯಿತು.