ಸುಬ್ರಹ್ಮಣ್ಯ: ಯುವ ಜನತೆಯ ಪ್ರಗತಿಯಿಂದ ರಾಷ್ಟ್ರದ ಏಳಿಗೆ ಸಾಧಿತವಾಗುತ್ತದೆ. ಭವಿಷ್ಯದಲ್ಲಿ ಯುವ ಜನತೆಯ ಅಭ್ಯುದಯಕ್ಕೆ ಯುಗದಲ್ಲಿ ಗಣಕಯಂತ್ರ ಜ್ಞಾನ ಅಡಿಗಲ್ಲಾಗುತ್ತದೆ.ಆದುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದೆ.ಇದು ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಪ್ರಗತಿ ಸಾಧಿಸಲು ಅನುಕೂಲತೆ ಒದಗಿಸುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರು
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸುರತ್ಕಲ್‌ನ ಎನ್‌ಐಟಿಕೆಯ ಸ್ಟೆಪ್‌ನ ಸಹಭಾಗಿತ್ವದಲ್ಲಿ ನಡೆದ ಕಂಪ್ಯೂಟರ್ ತರಬೇತಿಯ ಸಮಾರೋಪ ಮತ್ತು ರಾಷ್ಟೀಯ ಯುವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣಕಯಂತ್ರ ತರಬೇತಿಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಯುವ ಜನತೆ ತಾಂತ್ರಿಕ ಜ್ಞಾನ ಪಡೆಯುವಲ್ಲಿ ಹೆಚ್ಚು ಆಕರ್ಷಿತರಾಗಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯ ತಿಳುವಳಿಕೆಯು ಅವಶ್ಯಕ ಎಂದರು.
ವಿಕಾಸ ಮತ್ತು ಆನಂದಗಳ ಸಮ್ಮಿಲನ ಮುಖ್ಯ: ಸೋಮಶೇಖರ ನಾಯಕ್
ವಿವೇಕ ಮತ್ತು ಆನಂದಗಳನ್ನು ಮೈಗೂಡಿಸಿಕೊಂಡರೆ ಯುವ ಜನಾಂಗದ ವಿಕಾಸ ಸಾಧ್ಯ. ರಾಷ್ಟೀಯತೆ, ಸಂಸ್ಕಾರ, ಸಮಾನತೆ, ಸಹೋದರತೆಯನ್ನು ಸಾರುವ ಶ್ರೇಷ್ಠ ಸಂಸ್ಕೃತಿಯನ್ನು ವಿವೇಕಾನಂದರು ತಿಳಿಸಿದರು.ಗುರು ಪರಂಪರೆಯುಳ್ಳ ಈ ದೇಶದಲ್ಲಿ ಅದ್ಯಾತ್ಮ ಪ್ರಖರತೆಯ ಕಿಡಿಯನ್ನು ಹಚ್ಚಿದವರು ಸ್ವಾಮಿ ವಿವೇಕಾನಂದರು.ರಾಷ್ಟ್ರಪ್ರೇಮಿ ಸಂತರಾದ ಇವರು ಯುವ ಜನಾಂಗದ ಮನ ಮನಗಳಲ್ಲಿ ದೇಶಪ್ರೇಮದ ಕಹಳೆಯನ್ನು ಮೊಳಗಿಸಿದರು. ಇಂತಹ ಶುಭದಿನ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಪಡೆದ ಗಣಕಯಂತ್ರ ತರಬೇತಿಯ ಪ್ರಮಾಣ ಪತ್ರ ನೀಡುತ್ತಿರುವುದು ತುಂಬು ಸಂತಸ ತಂದಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.
ಎನ್‌ಐಟಿಕೆಯ ಸ್ಟೆಪ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ದಿನೇಶ್ ನಾಯಕ್, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಎನ್‌ಐಟಿಕೆಯ ಸ್ಟೆಪ್ ವಿಭಾಗದ ಸಂಯೋಜಕ ಸುಜಿತ್, ಲೆಕ್ಕಾಧಿಕಾರಿ ಸ್ವಪ್ನಾ, ವಿದ್ಯಾರ್ಥಿಗಳಾದ ಕ್ಷಿತೀಜ್ ಮತ್ತು ನೀರಜ್, ಎಸ್‌ಎಸ್‌ಪಿಯು ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕಿ ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಗಣಕಯಂತ್ರ ತರಬೇತುದಾರೆ ಮತ್ತು ಉಪನ್ಯಾಸಕಿ ಪೂರ್ಣಿಮಾ ವೇದಿಕೆಯಲ್ಲಿದ್ದರು.
ಪ್ರಮಾಣಪತ್ರ ಹಸ್ತಾಂತರ:
ಆರಂಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಬಳಿಕ ಗಣ್ಯರು ರಾಷ್ಟ್ರಪ್ರೇಮಿ ಸಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ನಂತರ ಕಳೆದ ಒಂದು ವರ್ಷಗಳಿಂದ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ಹಸ್ತಾಂತರಿಸಿದರು.ಸಮಾರಂಭದಲ್ಲಿ ವಿದ್ಯಾರ್ಥಿಗಳು ಸನ್ಯಾಸಿ ಗೀತೆ ಹಾಡಿದರು.
ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕಿ ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಸ್ವಾಗತಿಸಿದರು.ಉಪನ್ಯಾಸಕಿ ಸೌಮ್ಯಾ ದಿನೇಶ್ ವಿದ್ಯಾರ್ಥಿಗಳ ಹೆಸರು ವಾಚಿಸಿದರು.ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಸವಿತಾ ಕೈಲಾಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಜ್ಯೋತಿ.ಪಿ.ರೈ, ಸೌಮ್ಯಾ , ಭವ್ಯಶ್ರೀ ಕುಲ್ಕುಂದ, ಸಿಬಂಧಿ ಮಹೇಶ್ ಕೆ.ಎಚ್ ಹಾಗೂ ರೆಡ್‌ಕ್ರಾಸ್ ಸ್ವಯಂಸೇವಕರು ಸಹಕರಿಸಿದರು.
ವಿವೇಕ ವಾಣಿ ಆಲಿಸಿದ ವಿದ್ಯಾರ್ಥಿಗಳು:
ಕಾಲೇಜಿನ ಯುವ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವಿವೇಕ ವಾಣಿ ವಾಚನ ನಡೆಯಿತು.ರೆಡ್ ಕ್ರಾಸ್ ಸ್ವಯಂಸೇವಕರು ಪ್ರತಿ ತರಗತಿಗಳಿಗೆ ತೆರಳಿ ವಿವೇಕಾನಂದ ನುಡಿಗಳನ್ನು ವಾಚಿಸಿದರು.ಕಾಲೇಜಿನ 1050 ವಿದ್ಯಾರ್ಥಿಗಳು ವಿವೇಕವಾಣಿ ಆಲಿಸಿದರು. ಅಲ್ಲದೆ ಕಾಲೇಜಿನ ಎನ್‌ಎಸ್‌ಎಸ್ ಮತ್ತು ರೋರ‍್ಸ್ ಮತ್ತು ರೇಂರ‍್ಸ್ ಘಟಕದ ವತಿಯಿಂದ ರಾಷ್ಟೀಯ ಯುವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.