ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನ.ಪಂ. ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬಜೆಟ್ ತಯಾರಿ ಪೂರ್ವಭಾವಿ ಸಭೆಯು ನಡೆಯಿತು. ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಗಿರೀಶ್ ಎಂಬವರು ಮಾತನಾಡಿ, ನಗರ ಪಂಚಾಯತ್‌ಗೆ ಮಿಗತೆ ಬಜೆಟ್ ಅವಶ್ಯಕತೆಯಿಲ್ಲ. ಅದರ ಬದಲು ಉಳಿಕೆ ಹಣವನ್ನು ರಸ್ತೆ ಹೊಂಡ-ಗುಂಡಿ ಮುಚ್ಚಲು ಮತ್ತಿತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಖರ್ಚಾಗದೇ ಉಳಿಕೆ ಆಗಿರುವ ಅನುದಾನವನ್ನು ವಾರ್ಡ್ ಗಳಿಗೆ ಹಂಚಿಕೆ ಮಾಡಿ ಅಗತ್ಯ ಕೆಲಸ ಮಾಡಿಸಬಹುದು ಎಂಬ ಸಲಹೆಯು ಸಭೆಯಲ್ಲಿ ಕೇಳಿಬಂದವು. ಈ ಹಿಂದೆಯಿಂದಲು ಭಾರಿ ಆಕ್ರೋಶಕ್ಕೆ ಗುರಿಯಾದ ಜಟ್ಟಿಪಳ್ಳ ರಸ್ತೆಯನ್ನು ಶೀಘ್ರ ದುರಸ್ತಿಗೆ ಸಭೆಯಲ್ಲಿ ಆಗ್ರಹಿಸಲಾಯಿತು. ಸುಳ್ಯ ಜಾತ್ರೆಯ ದೇವರ ಸವಾರಿ ಹೊರಡುವ ಮೊದಲು ರಸ್ತೆಯನ್ನು ತಾತ್ಕಲಿಕ ರೀತಿಯಲ್ಲಿ ದುರಸ್ತಿ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ಸಭೆಯಲ್ಲಿ ತಿಳಿಸಿದರು.
ನಗರ ಪಂಚಾಯತ್‌ನ ಆಡಳಿತದಲ್ಲಿರುವ ಪುರಭವನ ನಿರ್ವಹಣೆ ಸಮರ್ಪಕವಾಗಿಲ್ಲ ಅಲ್ಲದೆ ಮದುವೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಕರೆ ಹಾಲ್ ಸ್ವಚ್ಚತೆ ಮಾಡಬೇಕಾಗುತ್ತಿದೆ ಈ ರೀತಿ ಅವ್ಯವಸ್ಥೆಯಿಂದ ಇದ್ದಲ್ಲಿ ನ.ಪಂ.ಗೆ ಹೇಗೆ ಆದಾಯ ಬರಲು ಸಾಧ್ಯ ಎಂದು ಸದಸ್ಯರಾದ ಎಂ ವೆಂಕಪ್ಪ ಗೌಡ ಪ್ರಶ್ನಿಸಿದರು. ಮುಂದೆ ಪುರಭವನ ನಿರ್ವಹಣೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬಾಕಿ ಬಿಲ್ ವಸೂಲಿಗೆ ಒತ್ತಾಯ;
ನೀರು ಸರಬರಾಜು ಶುಲ್ಕ ತೆರಿಗೆ ಹೆಚ್ಚಿಸುವ ಮೊದಲು, ಬಾಕಿ ಇರಿಸಿಕೊಂಡ ಬಿಲ್ ವಸೂಲಿಗೆ ಕ್ರಮಕೈಗೊಳ್ಳುವಂತೆ ವೆಂಕಪ್ಪ ಗೌಡ ಒತ್ತಾಯಿಸಿದರು. ತೆರಿಗೆ ಕಟ್ಟುವವರು ಮಾತ್ರ ತೆರಿಗೆ ಕಟ್ಟುವುದಾ, ಬಾಕಿ ಉಳಿಸಿಕೊಂಡವರನ್ನು ತೆರಿಗೆ ಕಟ್ಟಿಸಲು ಕ್ರಮ ಯಾಕಿಲ್ಲ. ಎಂದು ಅವರು ಪ್ರಸ್ತಾಪಿಸಿದರು. ಲೆಕ್ಕಪರಿಶೋಧನಾ ಶುಲ್ಕ ಹೆಚ್ಚಳಗೊಂಡಿರುವುದಕ್ಕೆ ನಾವು ಮಾಡುತ್ತಿರುವ ತಪ್ಪುಗಳು ಕಾರಣ ಎಂದು ಅವರು ದೂರಿದರು.
ಸಿಬ್ಬಂದಿಗಳ ಕಾರ್ಯವೈಖರಿಗೆ ಅಸಮಾಧಾನ;
ನ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಕೆಲ ಸಿಬ್ಬಂದಿಗಳು ಸಾರ್ವಜನಿಕರಿಗೆ ಸರಿಯಾಗಿ ನಿರ್ದೇಶನ ನೀಡುತ್ತಿಲ್ಲ ಎಂದು ದೂರಲಾಯಿತು. ಸಿಬ್ಬಂದಿಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ನ.ಪಂ. ಕೆಲಸಗಳು ಸಮರ್ಪಕವಾಗಲಿದೆ. ಆದರೆ ಇಲ್ಲಿನ ಕೆಲ ಸಿಬ್ಬಂದಿಗಳ ವರ್ತನೆಯಿಂದ ಸಾರ್ವಜನಿಕರು ಕಛೇರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗೆ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿ ಅವರು ಸಿಬ್ಬಂದಿಗಳಿಗೆ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಲು ಸೂಚನೆ ನೀಡಬೇಕು ಎಂದು ತಿಳಿಸಲಾಯಿತು.
ಸಭೆಯಲ್ಲಿ ಇಂಜಿನಿಯರ್ ಅವರು ಇಲ್ಲದ ಬಗ್ಗೆ ಪ್ರಸ್ತಾಪವಾಗಿ ಅವರನ್ನು ಸಭೆಗೆ ಕರೆಸುವಂತೆ ವೆಂಕಪ್ಪ ಗೌಡ ಹೇಳಿದರು. ಬಳಿಕ ಇಂಜಿನಿಯರ್ ಸಭೆಗೆ ಆಗಮಿಸಿ ಮಾಹಿತಿ ನೀಡಿದರು. ಸಭೆಯಲ್ಲಿ ಕೆಲ ಸಿಬ್ಬಂದಿಗಳ ಬಗ್ಗೆ ಅಧಿಕಾರಿ ಗರಂ ಆದ ಘಟನೆಯೂ ನಡೆಯಿತು.
ಪಾರ್ಕಿಂಗ್-ಸಭೆ ಕರೆಯಲು ತೀರ್ಮಾಣ:
ಕೆಲ ದಿನಗಳ ಹಿಂದೆ ನಗರದ ಪಾರ್ಕಿಂಗ್ ವಿಚಾರದ ಬಗ್ಗೆ ಪೊಲೀಸರು ವರ್ತಕರ ಜೊತೆ ನಡೆಸಿದ ಸಭೆಯ ಬಗ್ಗೆ ನ.ಪಂ.ಗೆ ಮಾಹಿತಿ ನೀಡದೇ ಇದ್ದುದರ ಬಗ್ಗೆ ಸಭೆಯಲ್ಲಿ ಪ್ರöಸ್ತಾಪಿಸಲಾಯಿತು. ಅಂದು ಕಾಟಾಚಾರದ ಸಭೆ ನಡೆಸಲಾಗಿದೆ, ಸಭೆಯಲ್ಲಿ ತಿಳಿಸಿದಂತೆ ಜನವರಿ ಬಳಿಕವೂ ಯಾವುದೇ ಅನುಷ್ಠಾನ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ಮುಂದೆ ಜಾತ್ರೆಯ ಮೊದಲು ಪಾರ್ಕಿಂಗ್ ವಿಚಾರದ ಬಗ್ಗೆ ಸಭೆ ಕರೆಯಲು ನಿರ್ಧರಿಸಲಾಯಿತು. ಸಭೆಗೆ ವೃತ್ತ ನಿರೀಕ್ಷಕರು, ಎಸೈ ಅವರು ಕಡ್ಡಾಯವಾಗಿ ಆಗಮಿಸಬೇಕು ಎಂದು ಒತ್ತಾಯಿಸಲಾಯಿತು.
ಕಠಿಣ ಕ್ರಮಕ್ಕೆ ಒತ್ತಾಯ:
ನಗರದಲ್ಲಿ ಅಳವಡಿಸಲಾದ ಬ್ಯಾನರ್ ಹರಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಈ ಬಗ್ಗೆ ನಿರ್ಣಯ ಕೈಗೊಂಡು ಪೊಲೀಸ್ ಇಲಾಖೆಗೆ ಕಳುಹಿಸಲು ಸಲಹೆ ನೀಡಲಾಯಿತು. ಕೆಇಬಿ ಅವರು ವಿದ್ಯುತ್ ಕಂಬ ಹಾಕುವಾಗ ನ.ಪಂ. ಅನುಮತಿ ಪಡೆಯಲಿ ಎಂದು ಸದಸ್ಯರು ತಿಳಿಸಿದರು. ಅಕ್ರಮ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಸಭೆ ಆರಂಭದಲ್ಲಿ ನಗರ ಪಂಚಾಯತ್ ವತಿಯಿಂದ ಮನೆ ರಿಪೇರಿಗಳಿಗೆ ಸಹಾಯಧನವನ್ನು ಆಡಳಿತಾಧಿಕಾರಿಗಳು ವಿತರಿಸಿದರು.
ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವನಿಕರು ಭಾಗವಹಿಸಿದ್ದರು.
- Thursday
- November 21st, 2024