Ad Widget

ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿಯಿಂದ ಪತ್ರಿಕಾ ಗೋಷ್ಠಿ



ಡಿ.26 ರಂದು ಕೆ.ವಿ.ಜಿ ಯವರ ಹುಟ್ಟುಹಬ್ಬದಂದು (ಸ್ಥಾಪಕರ ದಿನಾಚರಣೆ)ಅಕಾಡೆಮಿ ಅಧ್ಯಕ್ಷರಾದ ಡಾ| ಚಿದಾನಂದರು ಭಾಷಣ ಮಾಡುತ್ತಾ ಕೆಲವರು ಉತ್ತಮವಾಗಿ ನಡೆಯುತ್ತಿರುವ ಅಕಾಡೆಮಿಯನ್ನು ನಾಶ ಮಾಡಲು ಹೊರಟಿದ್ದಾರೆ, ಅಕಾಡೆಮಿಯನ್ನು ವಿಭಜಿಸಲು ಆಗುವುದಿಲ್ಲ ಎಂಬ ಕಾನೂನನ್ನು ತಿಳಿಯದವರು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂಬಿತ್ಯಾದಿ ಆಪಾದನೆಗಳನ್ನು ಮಾಡಿರುವುದು ಪ್ರತಿಕೆಗಳಲ್ಲಿ ಕೂಡಾ ಪ್ರಕಟವಾಗಿದೆ.

. . . . .

ಡಾ। ಚಿದಾನಂದರವರೇ, ನಾವು ಎಂದೂ ಅಕಾಡೆಮಿಯನ್ನು ನಾಶ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಅಕಾಡೆಮಿಯ ವಿದ್ಯಾಸಂಸ್ಥೆಗಳನ್ನು ನಾಶ ಮಾಡಲು ಹೊರಟಿರುವವರು ನೀವೇ, ಸಹೋದರರಿಬ್ಬರಲ್ಲಿ ಹೊಂದಾಣಿಕೆ ಇಲ್ಲದೆ ಅಕಾಡೆಮಿಯ 5-6 ಪ್ರಕರಣಗಳು ನ್ಯಾಯಾಲಯದಲ್ಲಿ ದಾವೆಯಾಗಿ ಇರುವುದೇ ಇದಕ್ಕೆ ಸಾಕ್ಷಿ. ಅಕಾಡೆಮಿಯನ್ನು ವಿಭಜನೆ ಮಾಡಲು ಬರುವುದಿಲ್ಲವೆಂಬುದು ಹಲವಾರು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ನಿರ್ದೇಶಕರುಗಳಾಗಿ ಹಾಗೂ ಅಧ್ಯಕ್ಷರುಗಳಾಗಿ ದುಡಿಯುತ್ತಿರುವ ನಮಗೆ ಕಾನೂನಿನ ಸ್ಪಷ್ಟ ಜ್ಞಾನವಿದೆ. ಆದರೆ ಅಕಾಡೆಮಿಯನ್ನು ಆಡಳಿತದ ಹಿತದೃಷ್ಟಿಯಿಂದ ಪೂಜ್ಯ ಕೆ.ವಿ.ಜಿಯವರ ಜೀವಿತಾವಧಿಯಲ್ಲಿಯೇ ನಿಮ್ಮ ಆಡಳಿತ ಮಂಡಳಿಯಲ್ಲಿ ಎ ಮತ್ತು ಬಿ ವಿಭಾಗಗಳಾಗಿ ವಿಭಜಿಸಿದ್ದು ಮತ್ತು ಅದಕ್ಕೆ ತಾವುಗಳೆಲ್ಲಾ ಸಹಿ ಮಾಡಿರುವುದು ತಮಗೆ ತಿಳಿದಿದೆಯೇ? ಆ ನಿರ್ಣಯದ ಆಶಯದಂತೆ ನಡೆದುಕೊಳ್ಳಿ ಎಂದೇ ನಮ್ಮ ಮನವಿಯಾಗಿತ್ತು. ಸ್ಥಾಪಕರ ದಿನಾಚರಣೆಯಂದು ಅಕಾಡೆಮಿಯವರೇ ಕೆ.ವಿ.ಜಿ.ಯವರ ಪ್ರತಿಮೆಗೆ ಮಾಲೆ ಹಾಕಿ ಗೌರವ ಸೂಚಿಸುತ್ತಿರುವುದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿತ್ತೇ ಹೊರತು ಸಾರ್ವಜನಿಕರಾದ ನಾವುಗಳು ಆ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ಭಾಗವಹಿಸುತ್ತಿರಲಿಲ್ಲ ಆದರೆ ಕುರುಂಜಿಯವರ ಮೇಲಿನ ಅಪಾರವಾದ ಗೌರವದಿಂದ ಮೊದಲಿಗೆ ಸುದ್ದಿ ಬಿಡುಗಡೆಯ ಸಂಪಾದಕರಾದ ಡಾ| ಶಿವಾನಂದರ ಆಶಯದಂತೆ ಕೆ.ವಿ.ಜಿಯವರ ಹುಟ್ಟುಹಬ್ಬವನ್ನು ಸುಳ್ಯ ಹಬ್ಬವಾಗಿ ಪರಿವರ್ತಿಸಿ ಆಚರಿಸುತ್ತಿರುವುದು ಸಾರ್ವಜನಿಕರೇ ಹೊರತು ಅಕಾಡೆಮಿಯಲ್ಲಿ ಅಧಿಕಾರ ಹೊಂದಿರುವ ನೀವುಗಳಲ್ಲಾ ಎಂಬುದು ಸಾರ್ವತ್ರಿಕವಾಗಿ ಎಲ್ಲರಿಗೂ ತಿಳಿದಿದೆ. ಇಷ್ಟು ಮಾತ್ರವಲ್ಲ ಮಾನ್ಯ ಕೆ.ವಿ.ಜಿ.ಯವರ ಪ್ರತಿಮೆಯನ್ನು ಕೂಡಾ ಕೆ.ವಿ.ಜಿಯವರು ಸ್ಥಾಪಿಸಿದ ವಿದ್ಯಾಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರು ತಮ್ಮ ವೇತನದಿಂದ ನಿರ್ಮಿಸಿದ್ದಾಗಿರುತ್ತದೆ. ಇದರಲ್ಲೂ ಕೂಡಾ ತಮ್ಮ ಅಕಾಡೆಮಿಯ ಕೊಡುಗೆ ಏನೂ ಇರುವುದಿಲ್ಲ ಎಂದು ಸಾರ್ವಜನಿಕರೆಲ್ಲರಿಗೂ ತಿಳಿದಿದೆ. ತಾವೊಬ್ಬ ಗೌರವಯುತ ಸ್ಥಾನದಲ್ಲಿದ್ದು, ಭಾಷಣಗಳ ಮೂಲಕ
ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ನೀಡುತ್ತಿರುವುದು ಖಂಡನೀಯ. ಈ ಪ್ರವೃತ್ತಿಯನ್ನು ತಾವು ನಿಲ್ಲಿಸಬೇಕೆಂದು ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿಯು ತಮ್ಮಲ್ಲಿ ಆಗ್ರಹಿಸುತ್ತಿದೆ.

ಕೇವಲ ಸ್ಥಾಪಕರ ದಿನಾಚರಣೆಯಂದು ಕೆ.ವಿ.ಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರೆಯಲಾರದು. ಅದರ ಬದಲಾಗಿ ಅವರ ಆಶಯದಂತೆ ವಿದ್ಯಾಸಂಸ್ಥೆಗಳನ್ನು ಸಹೋದರರಿಬ್ಬರು ಸೌಹಾರ್ದತೆಯಿಂದ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ನಡೆಸಿಕೊಂಡು ಹೋದಾಗಲೇ ಅವರ ಆತ್ಮಕ್ಕೆ ಮತ್ತು ಸಾರ್ವಜನಿಕರಿಗೆ ನೆಮ್ಮದಿ ಉಂಟಾಗಬಹುದೆಂದು ನಾವು ಭಾವಿಸುತ್ತೇವೆ. ನಾವು ಈ ಹಿಂದೆ ಕೆ.ವಿ.ಜಿ.ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿಯಿಂದ ತಮಗೆ ಪತ್ರ ಬರೆದು ಐದು ಪ್ರಶ್ನೆಗಳನ್ನು ಲಿಖಿತವಾಗಿ ಕೇಳಿರುತ್ತೇವೆ. ಅಲ್ಲದೇ ಅದನ್ನು ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗವಾಗಿ ಕೇಳಿರುತ್ತೇವೆ. ಈ ಪ್ರಶ್ನೆಗಳಿಗೆ ಅಕಾಡೆಮಿಯ ಅಧ್ಯಕ್ಷರಾಗಿರುವ ತಾವು ತಮ್ಮ ಅಧಿಕೃತ ಪತ್ರದ ಮೂಲಕ ಉತ್ತರಿಸಬೇಕೇ ಹೊರತು ಬದಲಾಗಿ ನಮ್ಮ ಕೆಲವು ಸದಸ್ಯರುಗಳಿಗೆ ಅನಾಮಧೇಯ ಪತ್ರಗಳನ್ನು ಬರೆಯಿಸುವುದರ ಮೂಲಕ ತಾವು ನಮ್ಮ ಪ್ರಶ್ನೆಗಳಿಂದ ಪಾಲಾಯನವಾದ ಮಾಡಿರುವುದಾಗಿದೆ. ತಮಗೆ ನೈತಿಕತೆ ಇದ್ದಲ್ಲಿ ತಮ್ಮ ಲೆಟರ್‌ಹೆಡ್‌ನಲ್ಲಿ ತಮ್ಮ ಅಧಿಕೃತ ಸಹಿಯೊಂದಿಗೆ ಉತ್ತರಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ. ತಾವು ಬರೆಯಿಸುವ ಯಾವುದೇ ಅನಾಮಧೇಯ ಪತ್ರಗಳಿಗೆ ನಾವು ಕಿಂಚಿತ್ತೂ ಮಾನ್ಯತೆಯನ್ನು ನೀಡುವುದಿಲ್ಲ.

ಕೊನೆಯದಾಗಿ ಇನ್ನೂ ಕಾಲ ಮಿಂಚಿಲ್ಲ. ನ್ಯಾಯಾಲಯದಲ್ಲಿ ಹೋರಾಡುವುದನ್ನು ಬಿಟ್ಟು ಸೌಹಾರ್ಧತೆಯಿಂದ ಕೆ.ವಿ.ಜಿಯವರ ಹಾಗೂ ಸಾರ್ವಜನಿಕರ ಆಶಯದಂತೆ ಯಾವುದೇ ಗೊಂದಲಕ್ಕೆ ಎಡೆ ಮಾಡದೆ ವಿದ್ಯಾಸಂಸ್ಥೆಗಳನ್ನು ನಡೆಸಿಕೊಂಡು ಹೋಗಿ ಎಂಬುವುದೇ ನಮ್ಮ ಮನವಿ ಎಂದು ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಹಿತರಕ್ಷಣಾ ಸಮಿತಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!