ಸುಳ್ಯದಲ್ಲಿ ಹಾಕಿದ್ದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರ್ ಹಾನಿ ಮಾಡಿದ ಕಿಡಿಗೇಡಿಗಳು ವಿಕೃತಿ ಮೆರಿದಿರುವುದನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಮತ್ತು ಇಂತಹ ನೀಚ, ಹೀನ ಕೃತ್ಯವನ್ನು ಎಸಗುವವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ಯಾನರ್ ಹಾನಿ ಮಾಡಿದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಈ ಕುರಿತು ನ.ಪಂ. ನಲ್ಲಿ ನಿರ್ಣಯ ಬರೆದು ಪೋಲೀಸ್ ಇಲಾಖೆಗೆ ಕಳುಹಿಸಬೇಕು ಎಂದು ನ.ಪಂ.ನಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರುಗಳಾದ ಕೆ.ಎಸ್. ಉಮ್ಮರ್, ಎಂ. ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿ ಆಗ್ರಹಿಸಿದ್ದಾರೆ. ಜ.೬ರಂದು ನಡೆದ ಸಭೆಯಲ್ಲಿ ಅವರು ಆಗ್ರಹಿಸಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ಉಮ್ಮರ್ ಬ್ಯಾನರ್ ಹರಿದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಊರಿನ ಸೌಹಾರ್ದತೆಗೆ ಧಕ್ಕೆ ತರುವವರನ್ನು ಸುಮ್ಮನೆ ಬಿಡಬಾರದು” ಎಂದು ಹೇಳಿದರೆ, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿಯವರು, ಶುಭಾಶಯ ಬ್ಯಾನರ್ ಹರಿದಿರುವುದು ಸರಿಯಲ್ಲ. ಜಾ ತಿ – ಧರ್ಮ ನೋಡದೇ ನಿರ್ಧಾಕ್ಷಿಣ್ಯ ಕ್ರಮ ಆಗಲಿ ಎಂದು ಹೇಳಿದರು. ಅವರು ಮಾತಿಗೆ ಸಭೆಯಲ್ಲಿದ್ದ ಎಲ್ಲರೂ ಸಹಮತಿ ತೋರಿದರು.