ಕೆ ಎಸ್ ಆರ್ ಟಿ ಸಿ ಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಬಸ್ಸು ಚಾಲಕರಿಗೆ ಕೆಲಸ ನಿಲ್ಲಿಸುವಂತೆ ಅವರನ್ನು ನೇಮಕ ಮಾಡಿದ ಸಂಸ್ಥೆ ಏಕಾಏಕಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಸ್ ಚಾಲಕರು ತಮ್ಮ ಉದ್ಯೋಗ ಭದ್ರತೆಗಾಗಿ ಸ್ಪಷ್ಟ ಆದೇಶ ನೀಡಬೇಕೆಂದು ಆಗ್ರಹಿಸಿ ಜ.1ರಂದು ಸುಳ್ಯ ಬಸ್ಸು ಡಿಪೋ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗದಿದ್ದುದರಿಂದ ಇಂದು ತಾಲೂಕಿನ ಬಸ್ಸು ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು.
ಸುಳ್ಯದಲ್ಲಿ ಅಧಿಕಾರಿಗಳು ಯಾವುದೇ ಅಧಿಕೃತ ಭರವಸೆ ನೀಡದ ಹಿನ್ನೆಲೆಯಲ್ಲಿ ಚಾಲಕರೆಲ್ಲ ಪುತ್ತೂರಿಗೆ ತೆರಳಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕರು ಎಲ್ಲಾ 35 ಮಂದಿ ಚಾಲಕರಿಗೂ ಕೂಡ ಮುಂದಿನ 11 ತಿಂಗಳು ಯಾವುದೇ ಸಮಸ್ಯೆ ಇಲ್ಲದೆ ಕರ್ತವ್ಯ ನಿರ್ವಹಿಸಲು ಅನುಮತಿ ಪಡೆದು ಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಂದಿನ ಅವಧಿಗೆ ಯಾವುದೇ ರೀತಿಯ ಹಣವನ್ನು ಪಾವತಿಸದೆ ಕೆಲಸ ನಿರ್ವಹಿಸುವ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುವುದು ಎಂಬ ಭರವಸೆಯನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಚಾಲಕರು ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂದು ಚಾಲಕರು ತಿಳಿಸಿದ್ದಾರೆ.