ತಾಲೂಕಿನಲ್ಲಿ ಅತಿಯಾಗಿ ಭ್ರಷ್ಟಾಚಾರ ನಡೆಯುತಿದ್ದು, ಕಂದಾಯ, ಸರ್ವೇ ಹಾಗೂ ಉಪ ನೋಂದಾವಣೆ ಕಚೇರಿಯಲ್ಲಿ, ಮಧ್ಯವರ್ತಿಗಳು ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ. ಸರಕಾರದ ಚಲನ್ ಕಟ್ಟಿ ನೇರವಾಗಿ ಹೋದಲ್ಲಿ, ಅನೇಕ ಕಾನೂನುಗಳ ಬಗ್ಗೆ ಕುಂಟು ನೆಪ ಹೇಳಿ, ಸಾರ್ವಜನಿಕರನ್ನು ಭಯ ಪಡಿಸಿ ಹಣ ಪೀಕಿಸುವ, ಅಧಿಕಾರಿಗಳು ತುಂಬಿ ಹೋಗಿದ್ದಾರೆ. ನಾವು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು, ಶಾಸಕರು, ಕಡತ ಪರಿಶೀಲಸಿ, ಬಾಕಿ ಆಗಿರುವ ಕಡತಗಳ ಬಗ್ಗೆ, ಅಧಿಕಾರಿಗಳೊಂದಿಗೆ ಪ್ರಶ್ನೆ ಮಾಡಿ ಜನರ ಪರವಾಗಿ ನಿಂತು ಆಜ್ಞೆ ಮಾಡಬೇಕು. ಹಾಗೆಯೇ ಮಾಧ್ಯಮದವರು ಈ ಬಗ್ಗೆ ಆಗಾಗ್ಗೆ ಪ್ರತಿ ಕಚೇರಿಗೆ ಭೇಟಿ ನೀಡಿ ಜನರ ಜೊತೆ ಬೆರೆತು, ಅವರ ಸಮಸ್ಯೆ ಅಹವಾಲು ಕೇಳಿ, ಸಮಸ್ಯೆ ಬಗ್ಗೆ ಅಧಿಕಾರಿಗಳ ಹೇಳಿಕೆ ಪಡೆದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು. ಅಲ್ಲದೇ ಮಾದ್ಯಮದವರೂ ಲೋಕಾಯುಕ್ತದ ಬಗ್ಗೆ, ಅವರ ಕಾರ್ಯ ವಿಧಾನಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಈ ಮೂಲಕವು ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಆಗಬಹುದು.
ಯಾವುದೇ ಅಧಿಕಾರಿ ಲಂಚದ ಬೇಡಿಕೆ ಇಟ್ಟಲ್ಲಿ, ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದಲ್ಲಿ, ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ತುಂಬಾ ಸಹಕಾರ ಮಾಡುತ್ತಾರೆ. ದೂರುದಾರರಿಗೆ ಯಾವುದೇ ತೊಂದರೆ ಆಗದಂತೆ, ಉತ್ತಮ ಸ್ನೇಹಮಯಿಯಾಗಿ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ, ಭ್ರಷ್ಟರನ್ನು ಹಿಡಿದು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಇದ್ದು ಯಾವುದೇ ಭಯ ಪಡಬೇಕಾಗಿಲ್ಲ. ನಾವು ಆಗಾಗ್ಗೆ ಕೋರ್ಟ್ ಕಚೇರಿ ಅಂತ ಅಲೆದಾಟವೂ ಇಲ್ಲ, ನಾವು ಕೊಟ್ಟ ಲಂಚದ ಹಣ ನಮಗೆ ವಾಪಸು ದೊರೆಯುತ್ತದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Friday
- November 1st, 2024