ರೈತರ ಪಹಣಿ ಪತ್ರಗಳಲ್ಲಿ ಬೆಳೆಗಳ ವಿವರ ದಾಖಲೀಕರಣವಾಗದೇ ರೈತರಿಗೆ ತೊಂದರೆ ಆಗಿದ್ದು ಶೀಘ್ರ ಸರಿಪಡಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಎ.ಪಿ.ಎಂ.ಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಮನವಿ ಸಲ್ಲಿಸಿದ್ದಾರೆ.
ಮಡಪ್ಪಾಡಿ ಗ್ರಾಮದಲ್ಲಿ ಸುಮಾರು 650 ಜನಕ್ಕಿಂತಲೂ ಹೆಚ್ಚು ಪಹಣಿ ಖಾತೆಗಳನ್ನು ಹೊಂದಿ ಸುಮಾರು 1500 ರಷ್ಟು ಪಹಣಿ ಪತ್ರಗಳಿರುತ್ತವೆ. ಇದೀಗ ಬೆಳೆ ಸಮೀಕ್ಷೆ ಆ್ಯಪ್‌ಗಳ ಮುಖಾಂತರ ರೈತರ ಬೆಳೆಗಳ ನಮೂದಿಕರಣವನ್ನು ಸ್ವತ: ರೈತರೇ ನೋಂದಾಯಿಸಿಕೊಳ್ಳುವ ಒಳ್ಳೆಯ ವ್ಯವಸ್ಥೆಗಳನ್ನು ತಂದಿರುವುದು ಸರಕಾರದ ಶ್ಲಾಘನೀಯ ಕೆಲಸ. ಆದರೆ ನಮ್ಮ ಗ್ರಾಮ ಸುಳ್ಯ ತಾಲೂಕಿನ ಕೇಂದ್ರ ಸ್ಥಾನದಿಂದ ಸುಮಾರು 28 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿದ್ದು ಮತ್ತು ಬಹುತೇಕ ಶೇಕಡಾ 85% ಕ್ಕಿಂತಲೂ ಅರಣ್ಯ ಪ್ರದೇಶವನ್ನು ಹೊಂದಿರುವ ಗ್ರಾಮವಾಗಿದ್ದು, ಇಲ್ಲಿ ನಿತ್ಯ ನಿರಂತರ ನೆಟ್‌ವರ್ಕ್ ಸಮಸ್ಯೆಯ ಬವಣೆಯ ಮಧ್ಯೆ ಬದುಕುವ ರೈತನ್ನು ಹೊಂದಿರುವ ಪ್ರದೇಶ. ಬೆಳೆ ಸಮೀಕ್ಷೆಯ ಬಗ್ಗೆ ಕೃಷಿ ಇಲಾಖೆಯವರು ಕೂಡ ಪ್ರಯತ್ನಿಸುತ್ತಿದ್ದು ಇಲ್ಲಿ ಜಿ.ಪಿ.ಎಸ್. ಸಮಸ್ಯೆಯಿಂದ ಸೈಟ್ ಡೌನ್ ಲೋಡ್ ಆಗದೇ, ಸರ್ವೇ ನಂಬ್ರಗಳು ಹಾಕಿದಾಗ ಮೀಸ್ ಮ್ಯಾಚಿಂಗ್ ಆಗುತ್ತಿದ್ದು, ಬೆಳೆ ಸಮೀಕ್ಷೆಯನ್ನು ರೈತರಿಂದ ಮಾಡಲಾಗದೇ, ಕೃಷಿ ಇಲಾಖೆಯವರಿಂದಲೂ ಆಗದೇ, 2021-22ರ ಬೆಳೆ ಸಮೀಕ್ಷೆಯಲ್ಲಿ ಪಹಣಿ ಪತ್ರದಲ್ಲಿ ಬೆಳೆ ದಾಖಲೆ ಆಗದೇ ಬಾಕಿಯಾಗಿರುತ್ತದೆ.
ಇದೀಗ ಬೆಳೆ ಸಮೀಕ್ಷೆಯ ಅವಧಿ ಮುಗಿದಿದ್ದು ಕೃಷಿ ಇಲಾಖೆಯನ್ನು ವಿಚಾರಿಸಿದಾಗ ಉತ್ತರ ಸಿಗದ ಹಾಗೆ ಆಗಿರುತ್ತದೆ. ಆದುದರಿಂದ ಪಹಣಿ ಪತ್ರದಲ್ಲಿ ಬೆಳೆ ದಾಖಲಾಗದೇ ಇದ್ದಲ್ಲಿ ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು, ಸಬ್ಸಿಡಿಗಳು, ಬ್ಯಾಂಕ್‌ಗಳಿಂದ ಸೌಲ ಸೌಲಭ್ಯ, ಬೆಳೆ ವಿಮೆ ಇತ್ಯಾದಿ ಸೌಲಭ್ಯಗಳನ್ನು ಪಡೆಯುವರೇ, ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗುವ ಗಂಭೀರ ಸಮಸ್ಯೆ ಎದುರಾಗುವ ಆತಂಕವಿದ್ದು ಇದನ್ನು ಸರಿಪಡಿಸುವಂತೆ ಕಂದಾಯ ಸಚಿವ ಆರ್.ಅಶೋಕ್,ದ.ಕ. ಜಿಲ್ಲಾಧಿಕಾರಿ , ದ.ಕ. ಉಸ್ತುವಾರಿ ಮಂತ್ರಿಗಳಿಗೆ, ಮೀನುಗಾರಿಕಾ ಹಾಗೂ ಬಂದರು ಒಳನಾಡು ಸಾರಿಗೆ ಸಚಿವರಿಗೆ, ಸುಳ್ಯ ತಹಶೀಲ್ದಾರ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.