Ad Widget

ಭಕ್ತಿ, ಸಡಗರದ ಕಾಂಚೋಡು ಜಾತ್ರೋತ್ಸವ ಸಂಪನ್ನ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದು ಫೆ.14ರಂದು ಸಂಪನ್ನಗೊಂಡಿತು.

. . . . . . .

ಜಾತ್ರೋತ್ಸವದ ಅಂಗವಾಗಿ ಫೆ.11ರಂದು ಸಂಜೆ ತಂತ್ರಿಗಳವರ ಆಗಮನದ ಬಳಿಕ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇವರಿಂದ ಚೆಂಡೆವಾದನದೊಂದಿಗೆ ಹಸಿರುವಾಣಿಯನ್ನು ಶ್ರೀ ದೇವಳಕ್ಕೆ ತಂದು ಸಮರ್ಪಿಸಲಾಯಿತು. ರಾತ್ರಿ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವತಿಯಿಂದ ಹಸಿರು ಹೊರೆ ಕಾಣಿಕೆ ಸಮರ್ಪಿಸಲಾಯಿತು. ರಾತ್ರಿ ಬಿಂಬಶುದ್ಧಿ, ವಾಸ್ತುಪೂಜೆ, ವಾಸ್ತು ರಕ್ಷೋಘ್ನ ಹೋಮ ನಡೆಯಿತು. ಫೆ.12ರಂದು ಬೆಳಗ್ಗೆ ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ ಬಳಿಕ ಮಹಿಳೆಯರಿಂದ ವಿಶೇಷವಾಗಿ ಕುಂಕುಮಾರ್ಚನೆ ನಡೆದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ತಾಯಂಬಕಂ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದ ಬಳಿಕ ಶ್ರೀ ಮಂಜುನಾಥೇಶ್ವರ ಸ್ವಾಮಿ ಹಾಗೂ ಅಮ್ಮನವರ ಬಲಿ ಉತ್ಸವ ನಡೆದು ಶ್ರೀ ದೇವರ ಗಂಧಪ್ರಸಾದ ವಿತರಣೆ ನಡೆಯಿತು. ಫೆ.13ರಂದು ಬೆಳಗ್ಗೆ ಶ್ರೀ ದೇವಳದಲ್ಲಿ ಗಣಪತಿ ಹವನ, ಬೆಳಗಿನ ಪೂಜೆ ಬಳಿಕ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ ದರ್ಶನ ಬಲಿ ಉತ್ಸವ, ಶ್ರೀ ದೇವರ ಗಂಧಪ್ರಸಾದ, ಬಟ್ಟಲು ಕಾಣಿಕೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ರಾತ್ರಿ ಪೂಜೆ, ಪ್ರಸಾದ ಭೋಜನದ ನಂತರ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮ, ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಫೆ.14ರಂದು ಬೆಳಗ್ಗೆ ಬೆಳಗ್ಗಿನ ಪೂಜೆ, ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಅನಂತರ ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು ಕಾಯಾರ ಮಾಡದಲ್ಲಿ ಕಲ್ಲೇರಿತ್ತಾಯ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು. ಸಂಜೆ ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ದೇವಳದಲ್ಲಿ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಜರುಗಿತು. ಬೆಳಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಮೂಕಾಂಬಿಕ ಅಗ್ನಿಗುಳಿಗ ದೈವದ ನೇಮ, ಕಾಣಿಕೆ, ಪ್ರಸಾದ ವಿತರಣೆ, ಬಲಿ ನಡೆಯುವುದರೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು.

ಪ್ರತಿಷ್ಟಾ ವಾರ್ಷಿಕೋತ್ಸವದ ಅಂಗವಾಗಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.13ರಂದು ಯುವಕ ಮಂಡಲ(ರಿ.) ಕಳಂಜ, ಕೋಟೆಮುಂಡುಗಾರು ಪ್ರವರ್ತಿತ ಶ್ರೀ ಮಂಜುನಾಥ ಭಜನಾ ಮಂಡಳಿ ವತಿಯಿಂದ ಭಜನೆ ಹಾಗೂ ಮಕ್ಕಳ ಕುಣಿತ ಭಜನೆ ಹಾಗೂ ಯುವಕ ಮಂಡಲ(ರಿ.) ಕಳಂಜ, ಕೋಟೆಮುಂಡುಗಾರು ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ- ದಕ್ಷಯಾಗ, ಷಣ್ಮುಖ ವಿಜಯ ಯಕ್ಷಗಾನ ಬಯಲಾಟ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಯಸ್.ಬಿ.ದಳ, ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು ಹಾಗೂ ಪರಶುರಾಮ ಕಾಯಾರ ದೊಡ್ಡಮನೆ, ಶ್ರೀ ಕ್ಷೇತ್ರದ ಅರ್ಚಕರಾದ ಕೆ.ಎಸ್. ಗೋವಿಂದ ಭಟ್, ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕೆ.ನಾರಾಯಣ ಭಟ್, ಸಹಾಯಕರಾದ ಮೋಹನ ಗುಂಡಿಹಿತ್ಲು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಉತ್ಸವ ಸಮಿತಿ ಅಧ್ಯಕ್ಷರಾದ ಗಂಗಾಧರ.ಎಂ, ಉಪಾಧ್ಯಕ್ಷರಾದ ವಸಂತ ಕಾಯಾರ, ಪ್ರ.ಕಾರ್ಯದರ್ಶಿ ಹರ್ಷ ಜೋಗಿಬೆಟ್ಟು, ಕಾರ್ಯದರ್ಶಿ ರಾಧಾಕೃಷ್ಣ ಕೊಳೆಂಜಿಕೋಡಿ, ಕೋಶಾಧಿಕಾರಿ ಲೋಕೇಶ್ ಬೆಳ್ಳಿಗೆ, ಜೊತೆ ಕಾರ್ಯದರ್ಶಿ ಹೇಮಲತಾ ಕಾಯಾರ ಮತ್ತು ಸರ್ವ ಸದಸ್ಯರು, ಉಪಸಮಿತಿಗಳ ಸಂಚಾಲಕರು, ಸದಸ್ಯರುಗಳು, ಸ್ವಯಂಸೇವಕರು, ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ಮಾ.01ರಂದು ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ‘ಶತರುದ್ರಾಭಿಷೇಕ’ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!