ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವ ‘ಕಾಂಚೋಡು ಜಾತ್ರೋತ್ಸವ’ ನಡೆಯುತ್ತಿದ್ದು, ಫೆ.13ರಂದು ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮೋತ್ಸವ ನಡೆಯಿತು. ಸಂಜೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಪೂಜೆ, ಪ್ರಸಾದ ಭೋಜನದ ನಂತರ ರಾತ್ರಿ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮ, ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವಕ ಮಂಡಲ(ರಿ.) ಕಳಂಜ, ಕೋಟೆಮುಂಡುಗಾರು ಪ್ರವರ್ತಿತ ಶ್ರೀ ಮಂಜುನಾಥ ಭಜನಾ ಮಂಡಳಿ ವತಿಯಿಂದ ಭಜನೆ ಹಾಗೂ ಮಕ್ಕಳ ಕುಣಿತ ಭಜನೆ ನಡೆಯಿತು.
ನಂತರ ಯುವಕ ಮಂಡಲ(ರಿ.) ಕಳಂಜ, ಕೋಟೆಮುಂಡುಗಾರು ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ- ದಕ್ಷಯಾಗ, ಷಣ್ಮುಖ ವಿಜಯ ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಉಮೇಶ್ ಶೆಟ್ಟಿ ಉಬರಡ್ಕ, ಅಂಬಾಪ್ರಸಾದ್ ಪಾತಾಳ, ರವಿಚಂದ್ರ ಚೆಂಬು, ಕುಮಾರ ಸುಬ್ರಹ್ಮಣ್ಯ , ಮಹಾಬಲ ಕಲ್ಮಡ್ಕ, ಕೇಶವ ದೀಕ್ಷಿತ್ ಕೋಟೆಮುಂಡುಗಾರು, ಯುವ ಭಾಗವತರಾದ ಶಶಾಂಕ್ ಎಲಿಮಲೆ ಹಾಗೂ ಶ್ರೇಯಾ ಆಲಂಕಾರು ಇವರುಗಳನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
ಫೆ.14 ಸೋಮವಾರದಂದು ಬೆಳಗ್ಗೆ 6.00ರಿಂದ ಬೆಳಗ್ಗಿನ ಪೂಜೆ, ಬೆಳಗ್ಗೆ 10.00ರಿಂದ ಶ್ರೀ ದೇವಳದಲ್ಲಿ ರುದ್ರಾಭಿಷೇಕ, ಮಧ್ಯಾಹ್ನ 12.00ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಅನಂತರ ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು ಕಾಯಾರ ಮಾಡದಲ್ಲಿ ನೇಮೋತ್ಸವ, ಸಂಜೆ 6.00ರಿಂದ ಅಣ್ಣಪ್ಪ ಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.30ರಿಂದ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನದ ನಂತರ ರಾತ್ರಿ 10.00ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿರುವುದು. ಬೆಳಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಕಾಣಿಕೆ, ಪ್ರಸಾದ ವಿತರಣೆ, ಬಲಿ ನಡೆಯಲಿದೆ.