(ಚಿತ್ರ : ಶಾಂತಲಾ ಸುಬ್ರಹ್ಮಣ್ಯ)
ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭೆ ಸದಸ್ಯರಾಗಿರುವ ಹೆಚ್ ಡಿ ದೇವೇಗೌಡ ಅವರು ಫೆ.12 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ತುಲಾಭಾರ ಸೇವೆಯನ್ನು ನೆರವೇರಿಸಿ, ದೇವರ ದರ್ಶನ ಪಡೆದರು.
ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿದ ದೇವೇಗೌಡರನ್ನು ದೇಗುಲದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ದೇಗುಲದ ಗೋಪುರ ಬಳಿ ಸಸಿ ನೆಟ್ಟ ದಂಪತಿ, ಅಕ್ಕಿ, ಕಾಯಿ, ಬೆಲ್ಲದಿಂದ ತುಲಾಭಾರ ನೆರವೇರಿಸಿದರು.
ನಂತರ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದ ದೇವೇಗೌಡ ದಂಪತಿ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ಮಾಜಿ ಅಧ್ಯಕ್ಷ ಎಂ.ಬಿ ಸದಾಶಿವ, ಜೆಡಿಎಸ್ ನಾಯಕ ರಾದ ಮೀರಾ ಸಾಹೇಬ್ ಕಡಬ, ಸಿ.ಪಿ ಸೈಮನ್, ತಿಲಕ್ ಅಯ್ಯಟ್ಟಿ, ಸೋಮಸುಂದರ ಕೂಜುಗೋಡು, ಪ್ರವೀಣ್ ಮುಂಡೋಡಿ, ಜ್ಯೋತಿ ಪ್ರೇಮಾನಂದ ಮೆಟ್ಟಿನಡ್ಕ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಮೀಜಿಗಳ ಭೇಟಿಯ ಬಳಿಕ ದೇವರ ದರ್ಶನ ಪಡೆದರು. ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡ ದೇವೇಗೌಡ ದಂಪತಿಗೆ ಪ್ರಧಾನ ಅರ್ಚಕರು ಪ್ರಸಾದ ವಿತರಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಮಯದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದೆ, ಆಮೇಲೆ ಬಂದಿರಲಿಲ್ಲ. ಶನಿವಾರ ವಿಶೇಷ ದಿವಸವಾದ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು.