ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಫೆ.08 ರಂದು ಮಾನ್ಯ ಮುಜರಾಯಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ನಂತರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಡೆಸಲಾಗುತ್ತಿರುವ ವನಸಂವರ್ಧನಾ ಕಾರ್ಯಕ್ರಮದ ಅಂಗವಾಗಿ ನಾಗಸಂಪಿಗೆ ಗಿಡವನ್ನು ನೆಟ್ಟರು.
ನಂತರ ಮಾನ್ಯ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಅಂಗಾರ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ.ಕೆ.ವಿ ಅವರ ಉಪಸ್ಥಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 300 ಕೋಟಿ ರೂಪಾಯಿಗಳ ಮೂರನೇ ಹಂತದ ಮಾಸ್ಟರ್ ಪ್ಲಾನ್ ಅನ್ನು ಪ್ರಸ್ತಾವಿಸಲಾಗಿದೆ. ಈ ಪ್ರಸ್ತಾವಿತ ಮಾಸ್ಟರ್ ಪ್ಲಾನ್ ಬಗ್ಗೆ ಬೆಂಗಳೂರಿನಲ್ಲಿ ಹಾಗೂ ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕಾಮಗಾರಿಗಳನ್ನು ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಸಚಿವ ಸಂಪುಟ ಸಭೆಯ ಮುಂದಿರಿಸಿ ಒಪ್ಪಿಗೆ ಪಡೆದು ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಗೋ ಶಾಲೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ :- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 100 ಎಕರೆ ಪ್ರದೇಶದಲ್ಲಿ ಗೋಶಾಲೆಯನ್ನು ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಲಾಯಿತು. ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟದ ಬಳಿ ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯದೇ ಈ ಗೋಶಾಲೆಯನ್ನು ನಿರ್ಮಿಸಲಾಗುವುದು. ಈ ಬಗ್ಗೆ ವಿಸ್ತೃತ ವರದಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
35 ವರ್ಷದ ಮುಂದಿನ ಸ್ಥಿತಿಯ ಅಂದಾಜಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಿ :- ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಸರಿಯಲ್ಲ. ಮುಂದಿನ 35 ವರ್ಷಗಳ ನಂತರವೂ ಈ ಅಭಿವೃದ್ಧಿ ಕಾರ್ಯ ಪ್ರಸ್ತುತವಾಗಿರಬೇಕು. ದೇವಸ್ಥಾನದ ಸುತ್ತ-ಮುತ್ತಲ ಹಸಿರನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಹೇಳಿದರು.
ಮೊದಲ ಹಂತವಾಗಿ ರಾಜ್ಯದ 25 ದೇವಸ್ಥಾನಗಳನ್ನು ಸಮಗ್ರ ಅಭಿವೃದ್ಧಿಗೊಳಿಸುವ ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ಧಿಗೊಳಿಸುವುದು ಹಾಗೂ ಭಕ್ತರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಅಂಗಾರ, ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ.ನಿಂಗಯ್ಯ, ಎ.ಇ.ಓ ಪುಷ್ಪಲತಾ, ಕಡಬ ತಹಶೀಲ್ದಾರ್ ಅನಂತ ಶಂಕರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ಕುಮಾರ್ ದರ್ಬೆ, ವನಜಾ.ವಿ ಭಟ್, ಶೋಭಾ ಗಿರಿಧರ್, ಶ್ರೀವತ್ಸ, ಲೋಕೇಶ್, ಮನೋಹರ ರೈ, ಮಾಸ್ಟರ್ ಪ್ಲಾನ್ ನ ಮನೋಜ್, ಚಂದ್ರಶೇಖರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ