Ad Widget

ಬಿಜೆಪಿ ಪಕ್ಷ ಎಂದರೆ ಭಾರತೀಯ ಜನ ವಿರೋಧಿ ಪಕ್ಷ : ಅಶ್ರಫ್ ಮಾಚಾರ್

ಬಿಜೆಪಿ ಪಕ್ಷ ಎಂದರೆ ಭಾರತೀಯ ಜನ ವಿರೋಧಿ ಪಕ್ಷ : ಅಶ್ರಫ್ ಮಾಚಾರ್
ಎಸ್‌ಡಿಪಿಐ ಪಕ್ಷದ ವತಿಯಿಂದ ಜಾಗೋ ಕಿಸಾನ್ ಪಾದಾಯಾತ್ರೆ ಹಾಗೂ ಪ್ರತಿಭಟನಾ ಸಭೆಗಳನ್ನು ದೇಶವ್ಯಾಪ್ತಿ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸುಳ್ಯ ತಾಲೂಕು ಎಸ್‌ಡಿಪಿಐ ಪಕ್ಷದ ವತಿಯಿಂದ ಕೃಷಿ ಸಂಹಾರ ಬಿಜೆಪಿಯ ಹುನ್ನಾರ, ಕೃಷಿ ವಿನಾಶದ ಅಂಚಿನಿಂದ ದೇಶವನ್ನು ರಕ್ಷಿಸೋಣ, ಎಂಬ ಧ್ಯೇಯದಡಿ ಪ್ರತಿಭಟನಾ ಸಭೆ ಹಾಗೂ ಪ್ರತಿಭಟನಾ ರ್‍ಯಾಲಿ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಅ.೨೭ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಆಶ್ರಫ್ ಮಾಚಾರ್ ದಿಕ್ಸೂಚಿ ಭಾಷಣ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶದ ನುಡಿಗಳನ್ನಾಡಿದರು. ಬಿಜೆಪಿ ಪಕ್ಷದವರಿಗೆ ಜನವಿರೋಧಿ ನೀತಿಯನ್ನು ತರುವುದನ್ನು ಬಿಟ್ಟರೆ ದೇಶದ ಅಭಿವೃದ್ಧಿಯ ಬಗ್ಗೆ ಇವರಿಗೆ ಕಾಳಜಿಯಿಲ್ಲ. ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಾರೆ.ದೇಶದ ಬೆನ್ನೆಲುಬಾಗಿರುವ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ ಅವರನ್ನು ಗುಲಾಮರನ್ನಾಗಿಸುವ ಹುನ್ನಾರ ಇವರದ್ದಾಗಿದೆ. ಎಪಿಎಂಸಿ ನೀತಿಯನ್ನು ಕಾರ್ಪೋರೇಟರ್‌ಗಳ ಕೈಗೆ ನೀಡಿ ಇವರನ್ನು ನಂಬಿರುವ ರೈತರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಹೇಳಿದರು. ರೈತರನ್ನು ಬೆಳೆಗಳನ್ನು ಬೆಳೆಸಲು ಹೇಳಿ ಅವರಿಂದ ಪಡೆದುಕೊಳ್ಳುವ ಸಂದರ್ಭ ಬಂದಾಗ ಹಲವಾರು ರೀತಿಯ ನೀತಿ ನಿಯಮಗಳನ್ನು ಹೇಳಿ ಕೃಷಿಕರು ಬೆಳೆದ ಬೆಳೆಗೆ ಸರಿಯಾದ ಮೊತ್ತವನ್ನು ನೀಡದೆ ರೈತರ ರಕ್ತ ಹೀರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ಇಡೀ ದೇಶವನ್ನೇ ಮಾರಲು ಹೊರಟಿರುವ ವ್ಯಾಪಾರಸ್ಥರು ಇವರಾಗಿದ್ದಾರೆ ಎಂದು ಟೀಕಿಸಿದರು.

. . . . .


ರಾಜ್ಯ ಜೆಡಿಎಸ್ ಪಕ್ಷದ ಉಪಾಧ್ಯಕ್ಷ ಎಂ.ಬಿ ಸದಾಶಿವ ಮಾತನಾಡಿ “ಎ.ಪಿ.ಎಂ.ಸಿ ವ್ಯವಸ್ಥೆಯೂ ಬಿಜೆಪಿಯವರ ಕೈಗೆ ಸಿಲುಕಿ ಹದಗೇಟಿದೆ. ಎ.ಪಿ.ಎಂ.ಸಿ ಇರುವ ಹಲವಾರು ಕಡೆಗಳಲ್ಲಿ ಬಿಜೆಪಿಯವರೇ ಅಧಿಕಾರದಲ್ಲಿದ್ದೂ ಇಲ್ಲಿ ದಲ್ಲಾಳಿಗಳ ಕಾಟವಿದೆ ಎಂದು ದೂರುವ ಇವರೇ ದಲ್ಲಾಳಿಗಳಾಗಿದ್ದಾರೆಯೇ ಎಂದು ಪ್ರಶ್ನಿಸಿದರು. ರೈತರ ದುಡ್ಡಿನಲ್ಲಿ ಮೋಜು ಮಾಡುತ್ತಿರುವ ಇವರಿಗೆ ರೈತರ ಬೆವರಿನ ಬೆಲೆ ಹೇಗೆ ತಾನೇ ಗೊತ್ತಾಗಲೂ ಸಾಧ್ಯ. ಕೃಷಿಕರೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಸುಮಾರು ಹತ್ತು ಸಾವಿರ ವರ್ಷಗಳಿಂದ ಬಂದ ಕೃಷಿಯನ್ನು ಇದೀಗ ಬದಲಾಯಿಸಲು ಹೊರಟು ಖಾಸಗಿ ಕಂಪೆನಿಗಳಿಗೆ ಮಾರಾಟಕ್ಕೆ ಇಳಿದಿರುವುದು ದೇಶದ ದುರಂತವೇ ಸರಿ ಎಂದು ಹೇಳಿದರು.

ಕಡಬ ತಾಲೂಕು ಹಸಿರುಸೇನೆ ಅಧ್ಯಕ್ಷ ವಿಕ್ಟರ್ ಮಾತನಾಡಿ ಮಾನವೀಯತೆಯಿಂದ ಜೀವನ ಸಾಗಿಸಲು ಸಮಾಜಕ್ಕೆ ತೋರಿಸಿಕೊಟ್ಟವರು ಎಸ್.ಡಿ.ಪಿ.ಐಯವರಾಗಿದ್ದಾರೆ. ಕೊರೊನಾ ವೈರಸ್‌ಗೆ ತುತ್ತಾಗಿ ಮೃತರಾದ ಹಲವು ಮೃತದೇಹಗಳನ್ನು ಜಾತಿ ಧರ್ಮ ನೋಡದೆ ಅದರ ಅಂತಿಮ ಸಂಸ್ಕಾರಕ್ಕೆ ಸಹಕಾರಿಯಾದವರು ಇವರು. ಇದೀಗ ರೈತರ ಜೀವನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಕೊಡಲಿ ಏಟನ್ನು ನೀಡುತ್ತಿದೆ ಎಂದು ಗೊತ್ತಾದಾಗ ದೇಶ ವ್ಯಾಪ್ತಿ ರೈತರ ಪರವಾಗಿ ನಿಂತು ಹೋರಾಟಕ್ಕೆ ನಿಂತ ಯುವ ಸಮೂಹ ಇವರಾಗಿದ್ದಾರೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ದೇಶದ ಪ್ರಧಾನಿ ಮೋದಿಯವರ ಆಕೃತಿಯನ್ನು ದಸರಾ ಹಬ್ಬದ ಸಂದರ್ಭ ದಹಿಸಿ ಹಬ್ಬ ಆಚರಿಸುವ ಸಂದರ್ಭ ಬಂದೊದಗಿರುವತಂಹದು ಇವರ ಕೆಟ್ಟ ನೀತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಸಣ್ಣ ಪುಟ್ಟ ಕಾಯ್ದೆಗಳನ್ನು ಜಾರಿಗೆ ತಂದು ರೈತ ಮೇಲೆ ಕತ್ತಿ ಜಾಳಪಿಸಲು ಹೊರಟಿರುವುದು ಸರಿಯೇ ಎಂದು ಇವರು ಪ್ರಶ್ನಿಸಿದರು. ದೇಶ ನಾಶವಾಗಲು ಒಬ್ಬ ಕೆಟ್ಟ ರಾಜನಿದ್ದಾರೆ ಸಾಕು. ಅದೇ ನೀತಿಯನ್ನು ಮೋದಿಯವರು ಅನುಸರಿಸುತ್ತಿದ್ದಾರೆ. ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎಂದು ಹೇಳುವ ಮೋದಿಯವರು ಅವರೇ ಅಭಿವೃದ್ಧಿ ಹೊಂದುತ್ತಿದ್ದಾರೆ ದೇಶದ ಜನತೆ ವಿಕಾಸ ಹೊಂದಿಲ್ಲ ಎಂದು ಹೇಳಿದರು.


ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲು ಮಾತನಾಡಿ ಜನವಿರೋಧಿ ನೀತಿಯನ್ನು ಜಾರಿಗೆ ತರುವ ಬಿಜೆಪಿ ಸರಕಾರವು ಅವರ ವಿರುದ್ಧ ಪ್ರತಿಭಟಿಸಿದರೇ ಪ್ರತಿಭಟಿಸುವವರ ಮೇಲೆ ಮೊಕದ್ದಮೆಗಳನ್ನು ಹೂಡಿ ಬಾಯಿ ಮುಚ್ಚಿಸಲು ಪ್ರಯತ್ನ ಪಡುತ್ತಾರೆ. ಬಿಜೆಪಿಯ ಸಹ ಸಂಘಟನೆಗಳಿಗೆ ಸೂಕ್ತ ಉತ್ತರವನ್ನು ನೀಡಲು ಎಸ್‌ಡಿಪಿಐ ಪಕ್ಷ ಬೆಳೆದು ಬರುತಿದೆ ಎಂದು ಹೇಳಿದರು. ರೈತರ ವಿರೋಧಿ ನೀತಿಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು. ಸಭೆಯಲ್ಲಿ ಪಿಎಫ್‌ಐ ಪುತ್ತೂರು ಸಮಿತಿ ಅಧ್ಯಕ್ಷ ಜಾಬೀರ್ ಹರಿಯಡ್ಕ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಸುಳ್ಯ ಎಸ್‌ಡಿಪಿಐ ಪಕ್ಷದ ಅಧ್ಯಕ್ಷ ನಾಯಕರುಗಳಾದ ಶಾಫಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಸಮಿತಿ ಸದಸ್ಯ ರಫೀಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ತಾಲೂಕು ಸಮಿತಿ ಕಾರ್ಯದರ್ಶಿ ಮುಸ್ತಾಫ ಎಂ.ಕೆ ವಂದಿಸಿದರು. ಪ್ರತಿಭಟನಾ ಸಭೆಗೂ ಮುನ್ನ ಸುಳ್ಯ ಜ್ಯೋತಿ ವೃತ್ತದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದರು. ಇಕ್ಬಾಲ್ ಬೆಳ್ಳಾರೆ ಪಕ್ಷದ ಧ್ವಜವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂರವರಿಗೆ ಹಸ್ತಾಂತರಿಸಿ ರ್‍ಯಾಲಿಗೆ ಚಾಲನೆಯನ್ನು ನೀಡಿದರು.  ಈ ಸಂದರ್ಭದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.    

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!