ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕರಾಟೆ ತರಬೇತಿಗೆ ಚಾಲನೆ : ಮಕ್ಕಳಿಗೆ ಬೆಲ್ಟ್ ಪರೀಕ್ಷೆ

ಮಕ್ಕಳಲ್ಲಿ ದೈಹಿಕ ಸದೃಢತೆ, ಆತ್ಮವಿಶ್ವಾಸ ಹಾಗೂ ಸ್ವಯಂ ರಕ್ಷಣಾ ಕೌಶಲ್ಯ ಬೆಳೆಸುವ ಉದ್ದೇಶದಿಂದ ಶೋಟೋಕಾನ್ ಸ್ಕೂಲ್ ಆಫ್ ಕರಾಟೆ ಫೆಡರೇಷನ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕರಾಟೆ ತರಗತಿಗೆ ಚಾಲನೆ ನೀಡಲಾಗಿದೆ.

. . . . . . . . .

4ನೇ ಡ್ಯಾನ್ ಬ್ಲ್ಯಾಕ್ ಬೆಲ್ಟ್ ಕರಾಟೆ ಕೋಚ್ ರಾಮಕೃಷ್ಣ (ಕಿಶನ್) ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯದಲ್ಲಿ ಕರಾಟೆ ತರಬೇತಿ ನಡೆಯುತ್ತಿದ್ದು, ಇದರ ಅಂಗವಾಗಿ ಭಾನುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಭವನದಲ್ಲಿ ಬೆಲ್ಟ್ ಪರೀಕ್ಷೆ ನಡೆಯಿತು.

. . . . . . .

ಕರಾಟೆ ಬ್ಲ್ಯಾಕ್ ಬೆಲ್ಟ್ 8ನೇ ಡ್ಯಾನ್ ಯೋಗೇಶ್ ಹಾಗೂ 4ನೇ ಡಾನ್ ಬ್ಲ್ಯಾಕ್ ಬೆಲ್ಟ್ ಕರಾಟೆ ಶಿಕ್ಷಕ ರಾಮಕೃಷ್ಣ (ಕಿಶನ್) ಅವರು ಮಕ್ಕಳ ಬೆಲ್ಟ್ ಪರೀಕ್ಷೆ ನಡೆಸಿ, ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಡಾ. ರವಿ ಕಕ್ಕೆಪದವು, ಗೋಪಾಲ್ ಎಣ್ಣೆಮಜಲು, ಕಿಶೋರ್ ಆರಂಪಾಡಿ, ಮನೋಜ್ ದೇವರಗದ್ದೆ, ಭಾರತಿ ದಿನೇಶ್, ಸುಬ್ರಹ್ಮಣ್ಯ ಭಟ್, ರವೀಂದ್ರ ನೂಚಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಮಕ್ಕಳಿಗೆ ಕರಾಟೆ ಅತ್ಯಂತ ಉಪಯುಕ್ತ” : ಕರಾಟೆ ತರಬೇತಿ ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಉಪಯುಕ್ತವಾಗಿದ್ದು, ಸ್ವಾವಲಂಬನೆ ಹಾಗೂ ಸ್ವಯಂ ರಕ್ಷಣೆಯ ಕೌಶಲ್ಯವನ್ನು ಬೆಳೆಸುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ಸಮಾಜದಲ್ಲಿ ನಿರ್ಭಯವಾಗಿ ಓಡಾಡಲು ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಂತಹ ತರಬೇತಿ ಸಹಕಾರಿಯಾಗಿದೆ ಎಂದು ಗೋಪಾಲ್ ಎಣ್ಣೆಮಜಲು ಹೇಳಿದರು. ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ದೈಹಿಕ ಸಾಮರ್ಥ್ಯ ಹಾಗೂ ಆತ್ಮರಕ್ಷಣೆಯಂತಹ ಕೌಶಲ್ಯಗಳನ್ನು ಬೆಳೆಸುವ ಕರಾಟೆ ತರಗತಿಗಳಿಗೆ ಕಳುಹಿಸುವ ಮೂಲಕ ಮಕ್ಕಳನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಅವರು ತಿಳಿಸಿದರು.

“ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುತ್ತದೆ” : ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸರಿಯಾದ ಮಾರ್ಗದರ್ಶನದೊಂದಿಗೆ ಕರಾಟೆಯಂತಹ ಕಲೆಗಳನ್ನು ಕಲಿಸುವುದರಿಂದ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ಹಾಗೂ ದೈಹಿಕ ಸದೃಢತೆ ಹೆಚ್ಚುತ್ತದೆ. ಸಮಾಜದಲ್ಲಿ ಒಬ್ಬ ಸದೃಢ ವ್ಯಕ್ತಿಯಾಗಿ ಬೆಳೆಯಲು ಇದು ಸಹಕಾರಿಯಾಗುತ್ತದೆ ಎಂದು ಭಾರತಿ ದಿನೇಶ್ ಅಭಿಪ್ರಾಯಪಟ್ಟರು.

“ಗ್ರಾಮೀಣ ಮಕ್ಕಳ ಆಸಕ್ತಿ ಸಂತಸ ತಂದಿದೆ” : ಕರ್ನಾಟಕದಾದ್ಯಂತ ಸಂಸ್ಥೆಯ ಹಲವು ತರಬೇತಿ ಕೇಂದ್ರಗಳಿದ್ದು, ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತರಬೇತಿ ಕೇಂದ್ರ ಆರಂಭಿಸಿರುವುದು ಸಂತಸ ತಂದಿದೆ. ಇಲ್ಲಿನ ಮಕ್ಕಳಲ್ಲಿ ಕರಾಟೆ ಕಲಿಯುವ ಆಸಕ್ತಿ ಹೆಚ್ಚಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಕರಾಟೆ ಬ್ಲ್ಯಾಕ್ ಬೆಲ್ಟ್ 8ನೇ ಡ್ಯಾನ್ ಯೋಗೇಶ್ ಹೇಳಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading