ಹಿರಿಯ ಫೋಟೋಗ್ರಾಫರ್ ಸುಬ್ರಹ್ಮಣ್ಯದ ಲೋಕೇಶ್ ಬಿ.ಎನ್ ರವರಿಗೆ “ಛಾಯಾರತ್ನ ಪ್ರಶಸ್ತಿ” – ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಶಕಗಳ “ಛಾಯಾಗ್ರಾಹಕ ಹಾಗೂ ಪತ್ರಕರ್ತ”

ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬ್ರಹ್ಮಾವರ ವಲಯ ಇವುಗಳ ಜಂಟಿ ಆಶ್ರಯದಲ್ಲಿ ನೀಡಲಾದ “ಛಾಯಾರತ್ನ ಪ್ರಶಸ್ತಿ”ಗೆ ಹಿರಿಯ ಛಾಯಾಗ್ರಾಹಕ ಸುಬ್ರಹ್ಮಣ್ಯದ ಲೋಕೇಶ್.ಬಿ.ಎನ್ ಭಾಜನರಾಗಿದ್ದಾರೆ. ಆ.18ರಂದು ಬ್ರಹ್ಮಾವರದ ರೋಟರಿ ಸಭಾಭವನದಲ್ಲಿ ನಡೆದ ಎಸ್.ಕೆ.ಪಿ.ಎ ಬ್ರಹ್ಮಾವರ ವಲಯದ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಲೋಕೇಶ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬಳ್ಳಡ್ಕ ಬಿ.ನಾರಾಯಣ ಗೌಡ ಹಾಗೂ ವೇದಾವತಿ ದಂಪತಿಯ ಪುತ್ರರಾದ ಇವರು ನಾಲ್ಕು ದಶಕಗಳಿಗೂ ಹೆಚ್ಚು ಸಮಯಗಳಿಂದ ಛಾಯಾಗ್ರಹಣದೊಂದಿಗೆ ಸಮಾಜಮುಖಿ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಾಸನದಲ್ಲಿ ತಮ್ಮ ಭಾವ ಚಿನ್ನಪ್ಪ ಅವರಿಂದ ಛಾಯಾಗ್ರಹಣ ವೃತ್ತಿಯ ಆರಂಭಿಕ ತರಬೇತಿಯನ್ನು ಪಡೆದ ಇವರು 1992ರಲ್ಲಿ ಸುಬ್ರಹ್ಮಣ್ಯದಲ್ಲಿ “ಶಾಂತಲಾ ಸ್ಟುಡಿಯೋ & ವಿಡಿಯೋ” ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ವೃತ್ತಿಪರ ಛಾಯಾಗ್ರಾಹಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಕಪ್ಪು-ಬಿಳುಪು ಚಿತ್ರಗಳ ಆ ಕಾಲಘಟ್ಟದಿಂದ ಇಂದಿನ ಈ ಆಧುನಿಕ ಡಿಜಿಟಲ್ ತಂತ್ರಜ್ಞಾನ ಯುಗದವರೆಗೆ ಪ್ರತೀ ಹಂತದಲ್ಲಿಯೂ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗುತ್ತಾ ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಸಾವಿರಾರು ನೆನಪುಗಳನ್ನು ಸೆರೆ ಹಿಡಿಯುತ್ತಾ ಬಂದಿರುವ ಇವರು ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನ-ಮನದಲ್ಲಿ ಮನ್ನಣೆಗಳಿಸಿದ್ದಾರೆ. ಛಾಯಾಗ್ರಹಣ ವೃತ್ತಿಯ ಜೊತೆಗೆ ಸಂಘಟನಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯಾಧ್ಯಕ್ಷರಾಗಿ ಹಾಗೂ ಮಂಗಳೂರು-ಉಡುಪಿ ಅವಳಿ ಜಿಲ್ಲೆಗಳ ಉಪಾಧ್ಯಕ್ಷರಾಗಿ 2021 ರಿಂದ 2023ರವರೆಗೆ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಛಾಯಾಗ್ರಾಹಕರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಸಂಘಟನೆಯ ಚಟುವಟಿಕೆಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರ ಹಾಗೂ ಆಡಳಿತದ ಗಮನಕ್ಕೆ ತರುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದ ಇವರು ಛಾಯಾಗ್ರಹಣದ ಜೊತೆಗೆ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು, ಕಳೆದ ಸುಮಾರು ಎರಡೂವರೆ ದಶಕಗಳಿಂದ ಪ್ರಜಾವಾಣಿ ದಿನಪತ್ರಿಕೆಯ ಸುಬ್ರಹ್ಮಣ್ಯ ಭಾಗದ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಕಳೆದ ಮೂರು ದಶಕಗಳಿಂದ ರಾಜ್ಯದ ವಿವಿಧ ಪ್ರಮುಖ ದಿನಪತ್ರಿಕೆಗಳಿಗೆ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ ಇವರು ಸುಬ್ರಹ್ಮಣ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿರುವ ಇವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಅಖಿಲ ಭಾರತ ಅಯ್ಯಪ್ಪ ದೀಪೋತ್ಸವ ಸಮಿತಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕುಕ್ಕೆಶ್ರೀ ಜೇಸೀ ಅಧ್ಯಕ್ಷರಾಗಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷರಾಗಿ ಹಾಗೂ 2014ರಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ರೋಟರಿ ಕ್ಲಬ್ ಝೋನಲ್ ಲೆಫ್ಟಿನೆಂಟ್ ಮತ್ತು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇರಿದಂತೆ ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading