ಆ. 29ರಂದು ರಂಗಮನೆಯಲ್ಲಿ ಯಕ್ಷ ಸಂಭ್ರಮ | ಬೆಳ್ಳಿ ಸಂಭ್ರಮಕ್ಕೆ ಚಾಲನೆ; ದಿಗ್ಗಜರಿಂದ ‘ಭೀಷ್ಮ ವಿಜಯ’ ತಾಳಮದ್ದಳೆ, ಪ್ರಶಸ್ತಿ ಪ್ರದಾನ

ಸುಳ್ಯ: ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆ. 29ರಂದು ಯಕ್ಷ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.

. . . . . . . . .

ಸಂಜೆ 6 ಗಂಟೆಗೆ ಪ್ರಸಿದ್ಧ ಅರ್ಥಧಾರಿಗಳಿಂದ ‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಂಗಮನೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಚಾಲನೆ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದು, ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗಕರ್ತ ಪ್ರೊ. ಪವನ್ ಕಿರಣಕೆರೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

. . . . . . .

ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ 2026-27ನೇ ಸಾಲಿನ ‘ವನಜ–ಸುಜನಾ ರಂಗಮನೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ‘ಭೀಷ್ಮ ವಿಜಯ’ ತಾಳಮದ್ದಳೆಯಲ್ಲಿ ಹೊಸಮೂಲೆ ಗಣೇಶ್ ಭಟ್ ಭಾಗವತರಾಗಿ, ಪದ್ಯಾಣ ಜಯರಾಮ ಭಟ್ ಮದ್ದಳೆಯಲ್ಲಿ ಹಾಗೂ ವಳಕುಂಜ ಕುಮಾರ ಸುಬ್ರಹ್ಮಣ್ಯ ಚೆಂಡೆಯಲ್ಲಿ ಭಾಗವಹಿಸಲಿದ್ದಾರೆ. ಭೀಷ್ಮನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಸಾಲ್ವನಾಗಿ ಜಬ್ಬಾರ್ ಸಮೋ, ಅಂಬೆಯಾಗಿ ಪವನ್ ಕಿರಣಕೆರೆ, ಪರಶುರಾಮನಾಗಿ ರಾಧಾಕೃಷ್ಣ ಕಲ್ಚಾರು ಹಾಗೂ ಬ್ರಾಹ್ಮಣನಾಗಿ ಉಬರಡ್ಕ ಉಮೇಶ್ ಶೆಟ್ಟಿ ಅರ್ಥಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಂಜೆ 6 ಗಂಟೆಗೆ ತಾಳಮದ್ದಳೆ ಆರಂಭವಾಗಲಿದ್ದು, ಕಾರ್ಯಕ್ರಮದ ಮಧ್ಯೆ ಪ್ರಶಸ್ತಿ ಪ್ರದಾನ ಸಮಾರಂಭವು ಸುಮಾರು 30 ನಿಮಿಷಗಳ ಕಾಲ ನಡೆಯಲಿದೆ ಎಂದು ರಂಗಮನೆಯ ಅಧ್ಯಕ್ಷ ಜೀವನರಾಂ ಸುಳ್ಯ ತಿಳಿಸಿದ್ದಾರೆ.

25ನೇ ವರ್ಷಕ್ಕೆ ರಂಗಮನೆ

‘ಆರೋಗ್ಯಕರ ವಾತಾವರಣಕ್ಕಾಗಿ ಸಾಂಸ್ಕೃತಿಕ ರಂಗಹೆಜ್ಜೆ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭಗೊಂಡ ರಂಗಮನೆ ಇದೀಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ನಾಟಕ, ನೃತ್ಯ, ಸಂಗೀತ, ಯಕ್ಷಗಾನ, ಜಾದೂ, ಜಾನಪದ, ಕಲೆ ಹಾಗೂ ಸಾಹಿತ್ಯ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ ನೂರಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಂಗಮನೆಯ ವೇದಿಕೆಯಲ್ಲಿ ಈವರೆಗೆ ಸಾವಿರಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಆರು ಸಾವಿರಕ್ಕೂ ಅಧಿಕ ಮಕ್ಕಳು ಚಿಣ್ಣರಮೇಳದಲ್ಲಿ ಭಾಗವಹಿಸಿದ್ದಾರೆ. ನಿರಂತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಾಜ್ಯದ ಸಾವಿರಾರು ಕಲಾಸಕ್ತರನ್ನು ತನ್ನತ್ತ ಸೆಳೆದಿರುವ ರಂಗಮನೆ, ಬೆಳ್ಳಿ ಹಬ್ಬದ ಅಂಗವಾಗಿ ಮುಂದಿನ ಫೆ. 15ರವರೆಗೆ ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜೀವನರಾಂ ಸುಳ್ಯ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading