ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆ. 18ರಂದು BMS ಪ್ರತಿಭಟನೆ | ಮಂಗಳೂರಿನ ಟೌನ್‌ಹಾಲ್ ಮುಂಭಾಗ ಪ್ರತಿಭಟನೆ; ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ

ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜೂರ್ ಸಂಘ (BMS) ವತಿಯಿಂದ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ BMS ವತಿಯಿಂದ ಆ. 18ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನ ಟೌನ್‌ಹಾಲ್ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಲ್ಮಂಜ ತಿಳಿಸಿದ್ದಾರೆ.

. . . . . . . . .

ಸುಳ್ಯದ ಪತ್ರಿಕಾಭವನದಲ್ಲಿ ಆ. 11ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ನ್ಯಾಯಯುತ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ, ಪಿಂಚಣಿ, ಆರೋಗ್ಯ ರಕ್ಷಣೆ ಹಾಗೂ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

. . . . . . .

ರಾಷ್ಟ್ರೀಯ ಮಟ್ಟದಲ್ಲಿ ESIC ವೇತನ ಮಿತಿಯನ್ನು ₹21 ಸಾವಿರದಿಂದ ₹42 ಸಾವಿರಕ್ಕೆ ಹಾಗೂ EPF ವೇತನ ಮಿತಿಯನ್ನು ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು. EPS-95 ಕನಿಷ್ಠ ಮಾಸಿಕ ಪಿಂಚಣಿಯನ್ನು ₹1 ಸಾವಿರದಿಂದ ₹7,500ಕ್ಕೆ ಹೆಚ್ಚಿಸಿ, DA ಹಾಗೂ ಸಮಗ್ರ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಬೋನಸ್ ಲೆಕ್ಕಾಚಾರ ಮತ್ತು ಅರ್ಹತಾ ವೇತನ ಮಿತಿಯನ್ನು ಹೆಚ್ಚಿಸಬೇಕು. ಆಶಾ, ಅಂಗನವಾಡಿ ಸೇರಿದಂತೆ ಯೋಜನಾ ನೌಕರರ ಗೌರವಧನ ಹೆಚ್ಚಿಸಿ ಸಾಮಾಜಿಕ ಹಾಗೂ ನಿವೃತ್ತಿ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಅನ್ವಯಿಸುವ ಕಡೆಗಳಲ್ಲಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಜಾರಿಗೊಳಿಸಬೇಕು. ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುವ ಅಂಶಗಳನ್ನು ಹೊಂದಿರುವ ಶ್ರಮ ಸಂಹಿತೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು. ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿಸುವುದು, ಗ್ರಾಚ್ಯುಟಿ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಹೆಚ್ಚಿಸುವುದು ಹಾಗೂ ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ಕನಿಷ್ಠ ₹30 ಸಾವಿರಕ್ಕೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.

ಕಟ್ಟಡ ಕಾರ್ಮಿಕರಿಗೆ ನೇರ ಸಾಮಾಜಿಕ ಭದ್ರತೆಗೆ ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಸ್ಯೆಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದು BMS ಆಗ್ರಹಿಸಿದೆ. ಕಾರ್ಮಿಕರಿಗೆ ನೇರ ಪ್ರಯೋಜನ ನೀಡದ ಅನಗತ್ಯ ಯೋಜನೆಗಳನ್ನು ಪರಿಶೀಲಿಸಿ ರದ್ದುಪಡಿಸಿ, ಕಲ್ಯಾಣ ಮಂಡಳಿಯ ಹಣವನ್ನು ನೇರ ಸಾಮಾಜಿಕ ಭದ್ರತಾ ಸೌಲಭ್ಯಗಳಿಗೆ ಬಳಸಬೇಕು. ಮಂಡಳಿಯ ಯೋಜನೆಗಳಲ್ಲಿ ನಡೆದಿರುವ ಅವ್ಯವಸ್ಥೆ ಹಾಗೂ ಅಕ್ರಮಗಳ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸುಳ್ಯ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ನದಿ ಹಾಗೂ ಹಳ್ಳಗಳಿಂದ ಕಾನೂನುಬದ್ಧವಾಗಿ ಮರಳು ಸಂಗ್ರಹಿಸಿ ಸಾಗಿಸಲು ಸರಳ ಪರವಾನಗಿ ವ್ಯವಸ್ಥೆ ಜಾರಿಗೊಳಿಸಬೇಕು. ಕೆಂಪುಕಲ್ಲಿನ ದರ ಏರಿಕೆಯನ್ನು ನಿಯಂತ್ರಿಸಿ ಕಟ್ಟಡ ಕಾಮಗಾರಿ ಹಾಗೂ ಕಾರ್ಮಿಕರ ಉದ್ಯೋಗಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಬೇಕು. ಕಾರ್ಮಿಕರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ, ಬಾಕಿ ಇರುವ ವೈದ್ಯಕೀಯ ಮರುಪಾವತಿ, ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಸಹಾಯಧನ ಒದಗಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಹೆಚ್ಚಿಸುವುದು, ಬಾಕಿ ಇರುವ ವಿದ್ಯಾರ್ಥಿವೇತನ ಬಿಡುಗಡೆ ಮಾಡುವುದು, 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ವೈದ್ಯಕೀಯ ನೆರವು ಮುಂದುವರಿಸುವುದು ಮತ್ತು ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಹೊಂದಿದವರಿಗೆ ಕನಿಷ್ಠ ₹10 ಲಕ್ಷ ಪರಿಹಾರ ಹಾಗೂ ₹10 ಸಾವಿರ ಮಾಸಿಕ ಅಂಗವೈಕಲ್ಯ ಪಿಂಚಣಿ ನೀಡಬೇಕು ಎಂದರು.

ಆಟೋ ಚಾಲಕ-ಮಾಲಕರಿಗೂ ವಿವಿಧ ಬೇಡಿಕೆ
ಆಟೋ ರಿಕ್ಷಾ ಚಾಲಕ-ಮಾಲಕರಿಗೆ ಇಂಧನವನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕು. ಆಟೋ ಪರವಾನಗಿಯನ್ನು ಕನಿಷ್ಠ ಜಿಲ್ಲಾಮಟ್ಟಕ್ಕೆ ವಿಸ್ತರಿಸಿ, ಕೇರಳ ಮಾದರಿಯಲ್ಲಿ ರಾಜ್ಯಾದ್ಯಂತ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿಗಳಿಗೆ ವೈಜ್ಞಾನಿಕ ಹಾಗೂ ನ್ಯಾಯಯುತ ಪ್ರಯಾಣ ದರ ನಿಗದಿಪಡಿಸಿ ಕಾಲಕಾಲಕ್ಕೆ ಪರಿಷ್ಕರಿಸಬೇಕು. ಚಾಲಕ-ಮಾಲಕರಿಗೆ ಸ್ಮಾರ್ಟ್ ಕಾರ್ಡ್ ಹಾಗೂ ಏಕೀಕೃತ ಗುರುತಿನ ಚೀಟಿ ವ್ಯವಸ್ಥೆ ಜಾರಿಗೊಳಿಸಬೇಕು. ಚಾಲಕರು ಹಾಗೂ ಅವರ ಕುಟುಂಬಗಳಿಗೆ ಜೀವ, ಅಪಘಾತ ವಿಮೆ, ಆರೋಗ್ಯ ರಕ್ಷಣೆ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ಚಾಲಕ-ಮಾಲಕರ ಕಲ್ಯಾಣ ಮಂಡಳಿಯನ್ನು ಬಲಪಡಿಸಿ ಶಿಕ್ಷಣ, ವೈದ್ಯಕೀಯ, ವಿಮೆ, ಪಿಂಚಣಿ, ಅಪಘಾತ ಪರಿಹಾರ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.

ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೂ ರಕ್ಷಣೆ
ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ನ್ಯಾಯಯುತ ಕನಿಷ್ಠ ಕೂಲಿ ನಿಗದಿಪಡಿಸಿ ಕಾಲಕಾಲಕ್ಕೆ ಪರಿಷ್ಕರಿಸಬೇಕು. ರಬ್ಬರ್ ಬೆಲೆ ಕುಸಿತ ಹಾಗೂ ಮಳೆಗಾಲದಲ್ಲಿ ಉಂಟಾಗುವ ಆದಾಯ ನಷ್ಟಕ್ಕೆ ಆದಾಯ ರಕ್ಷಣಾ ಯೋಜನೆ ಜಾರಿಗೊಳಿಸಬೇಕು. ಎಲ್ಲ ರಬ್ಬರ್ ಟ್ಯಾಪಿಂಗ್ ಕಾರ್ಮಿಕರನ್ನು ಗುರುತಿಸಿ ಅಧಿಕೃತವಾಗಿ ನೋಂದಣಿ ಮಾಡಬೇಕು.

ಕಾರ್ಮಿಕರಿಗೆ ಆರೋಗ್ಯ, ಜೀವ ಹಾಗೂ ಅಪಘಾತ ವಿಮೆ, ಆಸ್ಪತ್ರೆ ಚಿಕಿತ್ಸೆಗೆ ನೆರವು, ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪರಿಹಾರ, ಅಂಗವೈಕಲ್ಯ ಪಿಂಚಣಿ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ಪಿಂಚಣಿ ಒದಗಿಸಬೇಕು. ಭೂಮಿ ಇಲ್ಲದ ಕಾರ್ಮಿಕರಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಸಹಾಯಧನ, ಮಕ್ಕಳಿಗೆ ವಿದ್ಯಾರ್ಥಿವೇತನ, ಶಿಕ್ಷಣ ನೆರವು ಹಾಗೂ ವಿವಾಹ ಸಹಾಯಧನ ಹೆಚ್ಚಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ರಬ್ಬರ್ ಕಾರ್ಮಿಕರಿಗೆ ಸುರಕ್ಷತಾ ಸಾಧನ, ಕುಡಿಯುವ ನೀರು, ಶೌಚಾಲಯ ಮತ್ತು ವಿಶ್ರಾಂತಿ ಸೌಲಭ್ಯ ಕಲ್ಪಿಸಬೇಕು. EPF, ESI, ಪಿಂಚಣಿ ಹಾಗೂ ಇ-ಶ್ರಮ್ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಗುತ್ತಿಗೆ ಹಾಗೂ ಮಧ್ಯವರ್ತಿ ಶೋಷಣೆಗೆ ಕಡಿವಾಣ ಹಾಕಿ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಉದ್ಯೋಗ ಭದ್ರತೆ ಖಚಿತಪಡಿಸಬೇಕು ಎಂದು ಹೇಳಿದರು.

ಕಾರ್ಮಿಕರ ಸಮಸ್ಯೆಗಳನ್ನು ಕೇವಲ ಘೋಷಣೆಗಳು ಅಥವಾ ತಾತ್ಕಾಲಿಕ ಪರಿಹಾರಗಳ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಾದ ನ್ಯಾಯಯುತ ವೇತನ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವ ಸಮಗ್ರ ನೀತಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಆ. 18ರಂದು ಮಂಗಳೂರಿನ ಟೌನ್‌ಹಾಲ್ ಮುಂಭಾಗ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ BMS ಅಂಗಸಂಸ್ಥೆಗಳು, ಯೂನಿಯನ್ ಪ್ರಮುಖರು, ಕಾರ್ಮಿಕ ಬಂಧುಗಳು ಹಾಗೂ ವಿವಿಧ ಕ್ಷೇತ್ರಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಕುಮಾರನಾಥ ಶೆಟ್ಟಿ ಕಲ್ಮಂಜ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ನಾರಾಯಣ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಮಧುಸೂದನ್, ತಾಲೂಕು ಕಾರ್ಯದರ್ಶಿ ಅನಿಲ್ ಮಂಡೆಕೋಲು ಹಾಗೂ ಭಾರತೀಯ ಮಜೂರ್ ಸಂಘದ ಕಡಬ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಮನೋಹರ, ಜಗನ್ನಾಥ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading