ಭಾರತೀಯ ವಿದ್ಯಾ ಭವನ ಪ್ರಕಟಿಸುವ ಆಂಗ್ಲ ಮಾಸಿಕದ ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆಯಲ್ಲಿ, ಐತಿಹಾಸಿಕ ‘ಅಮರ ಸುಳ್ಯ ಹೋರಾಟ’ದ ಕುರಿತ ಮಾಹಿತಿ ಪ್ರಕಟ

ಮುಂಬೈ : ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಎಂ. ಮುನ್ಷಿಯವರು, ಮಹಾತ್ಮ ಗಾಂಧೀಜಿಯವರ ಬೆಂಬಲದೊಂದಿಗೆ ಪ್ರಾರಂಭಿಸಿದ ಪ್ರತಿಷ್ಠಿತ ‘ಭಾರತೀಯ ವಿದ್ಯಾ ಭವನ್‌’ ಸಂಸ್ಥೆಯು ಹೊರತರುವ ಆಂಗ್ಲ ಮಾಸಿಕದ ಆಗಸ್ಟ್ ತಿಂಗಳ ಸ್ವಾತಂತ್ರ್ಯೋತ್ಸವ ವಿಶೇಷ – ಸಂಚಿಕೆಯಲ್ಲಿ, ದಕ್ಷಿಣ ಭಾರತದ ಐತಿಹಾಸಿಕ ‘ಅಮರ ಸುಳ್ಯ ಹೋರಾಟ’ದ ಕುರಿತು ಮಾಹಿತಿ ಪ್ರಕಟಗೊಂಡಿದೆ. ವಿಶೇಷವೆಂದರೆ, ಮ್ಯಾಗಜೀನ್‌ನ ಸಂಪಾದಕೀಯದಲ್ಲಿ, “ಬ್ರಿಟಿಷರ ಅನ್ಯಾಯದ ಕಂದಾಯ ನೀತಿಯ ವಿರುದ್ಧ ಸಾವಿರಾರು ಮಂದಿ ಒಗ್ಗೂಡಿ ಸಿಡಿದೆದ್ದ ಅಮರ ಸುಳ್ಯದ ಅಜ್ಞಾತ ಕಥೆ” ಎಂದು ಈ ಹೋರಾಟವನ್ನು ಹೆಮ್ಮೆಯಿಂದ ಉಲ್ಲೇಖಿಸಲಾಗಿದೆ. “ದ ಫರ್ಗಾಟನ್ ಸ್ಟೋರಿ ಆಫ್ ಅಮರ ಸುಳ್ಯ” ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಈ ಲೇಖನವನ್ನು ಸುಳ್ಯದ ಯುವ ಲೇಖಕ, ಪ್ರಸ್ತುತ ಇಂಡಿಪೆಂಡೆಂಟ್ ಡಾಕ್ಯುಮೆಂಟೇರಿಯನ್ ಹಾಗೂ ‘ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್ (ರಿ.)’ನ ಅಧ್ಯಕ್ಷರಾದ ಶ್ರೀ ಅನಿಂದಿತ್ ಕೆ.ಎಸ್(ಕೊಚ್ಚಿ) ಅವರು ರಚಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಹೊರತಂದಿರುವ ಈ ಸಂಚಿಕೆಯಲ್ಲಿ, ಯುವ ಓದುಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಿರಿಯ ಕಲಾವಿದ ಶ್ರೀ ಗೌತಮ್ ಸೇನ್ ಅವರು ಈ ಲೇಖನಕ್ಕೆ ಚಿತ್ರವಿನ್ಯಾಸ ಒದಗಿಸಿದ್ದಾರೆ. 1837ರಲ್ಲಿ ಬ್ರಿಟಿಷರ ಕಂದಾಯ ನೀತಿಯ ವಿರುದ್ಧ ಸುಳ್ಯದ ಮಣ್ಣಿನ ಮಕ್ಕಳು ಹೇಗೆ ಸಿಡಿದೆದ್ದರು ಎನ್ನುವ ವಿವರದ ಜೊತೆಗೆ, ಮಂಗಳೂರಿನಲ್ಲಿ ಅನಾವರಣಗೊಂಡಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ(Statue of Gallantry) ಪ್ರತಿಮೆಯ ಕುರಿತಾದ ಮಾಹಿತಿಯೂ ಈ ಲೇಖನದಲ್ಲಿ ಅಡಕವಾಗಿದೆ. ರಾಷ್ಟ್ರಮಟ್ಟದಲ್ಲಿ ಹಾಗೂ ಹೊರಗಡೆ ವ್ಯಾಪಕ ಓದುಗರನ್ನು ಹೊಂದಿರುವ ಈ ಪ್ರತಿಷ್ಠಿತ ಮ್ಯಾಗಜೀನ್‌ನಲ್ಲಿ ಲೇಖನ ಪ್ರಕಟಗೊಂಡಿರುವುದರಿಂದ, ದಕ್ಷಿಣ ಭಾರತದ ಈ ಭಾಗದ ಐತಿಹಾಸಿಕ ಘಟನೆಯ ಕುರಿತು ಇತರೆಡೆಯ ವಿದ್ಯಾರ್ಥಿಗಳಲ್ಲಿಯೂ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಲೇಖನವು ಅತ್ಯಂತ ಸಹಕಾರಿಯಾಗಿದೆ.

. . . . . . . . .

ಐತಿಹಾಸಿಕ ದಾಖಲಾತಿ ಹಾಗೂ ನಿರಂತರ ಸಂಶೋಧನೆ : ಈ ಹಿಂದೆಯೂ ಸ್ವಾತಂತ್ರ್ಯದ ‘ಅಮೃತ ಮಹೋತ್ಸವ’ದ ಸಂದರ್ಭದಲ್ಲಿ, ಅಂದಿನ ಕೇಂದ್ರ ಸಾಂಸ್ಕೃತಿಕ ಸಚಿವ ಮಾನ್ಯ ಜಿ. ಕಿಶನ್ ರೆಡ್ಡಿ ಅವರ ಅವಧಿಯಲ್ಲಿ, ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಶಯದಂತೆ ದೇಶದ ಪ್ರತಿಯೊಂದು ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಕೇಂದ್ರದಿಂದ ನಡೆದ ಮಾಹಿತಿ ಸಂಗ್ರಹಣೆಯ ಮಹತ್ಕಾರ್ಯವಾದ ‘ರೆಪಾಸಿಟರಿ ಪ್ರಾಜೆಕ್ಟ್’ ಯೋಜನೆಯಲ್ಲಿ ಸುಳ್ಯದ ಬೆಳ್ಳಾರೆಯ ಕುರಿತಂತೆ, ಲಂಡನ್‌ನ ದಾಖಲೆಗಳ ಆಧಾರದ ಮೇಲೆ ಅನಿಂದಿತ್ ಅವರು ಕಾಂಟ್ರಿಬ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ತಮ್ಮ ಫೌಂಡೇಷನ್ ಮೂಲಕ ಹಿನ್ನೆಲೆ ಅಧ್ಯಯನ ಹಾಗೂ ಡಾಕ್ಯುಮೆಂಟೇಷನ್ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

. . . . . . .

ಈ ಕಾರ್ಯವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ದೆಹಲಿಯಲ್ಲಿ ತಮ್ಮ ಸ್ನಾತಕೋತ್ತರ(ಟರ್ಮಿನಲ್ ಡಿಗ್ರಿ) ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ, ಲಂಡನ್‌ನ ಮೂಲ ದಾಖಲೆಗಳನ್ನು ಆಧರಿಸಿ ‘Unveiling Tulunad’s Bellare’ ಎಂಬ ವಿಷಯದ ಮೇಲೆ ಆಂಗ್ಲ ಭಾಷೆಯಲ್ಲಿ ಅವರು ಸಂಶೋಧನಾ ಪ್ರಬಂಧ(ಥೀಸಿಸ್ ವರ್ಕ್) ಮಂಡಿಸಿದ್ದರು. ಅಂದು ಬ್ರಿಟಿಷರು ದಾಖಲಿಸಿದ ನಿಖರವಾದ ಐತಿಹಾಸಿಕ ದಿನಾಂಕದ ಆಧಾರದ ಮೇಲೆಯೇ 2025ರ ಮಾರ್ಚ್ 30ರಂದು ‘ಅಮರ ಸುಳ್ಯ ವಿಜಯ ಸ್ಮರಣ ದಿವಸ’ವನ್ನು 188ನೇ ವರ್ಷದ ಸ್ಮರಣೆಯಾಗಿ ಬೆಳ್ಳಾರೆಯಲ್ಲಿ ತಮ್ಮ ಫೌಂಡೇಷನ್, ಗ್ರಾಮ ಪಂಚಾಯತ್, ಅಕ್ಷಯ ಯುವಕ ಮಂಡಲ – ನೆಟ್ಟಾರು ಹಾಗೂ ಸ್ನೇಹಿತರ ಕಲಾ ಸಂಘ – ಬೆಳ್ಳಾರೆ, ಇವರುಗಳ ಸಹಭಾಗಿತ್ವದಲ್ಲಿ ಮಾನ್ಯ ಶಾಸಕರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು.

ತಳಮಟ್ಟದ ಜಾಗೃತಿ ಹಾಗೂ ಮುಂದಿನ ಹೆಜ್ಜೆ : ಮುಂದಿನ ಹೆಜ್ಜೆಯ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಅನಿಂದಿತ್, “ದೆಹಲಿ ಹಾಗೂ ಇತರ ಭಾಗಗಳಲ್ಲಿ ಇಂದು ನಮ್ಮ ಊರಿನ ಐತಿಹಾಸಿಕ ವಿಚಾರಗಳಿಗೆ ಮನ್ನಣೆ ದೊರೆಯುತ್ತಿದೆ. ಇಷ್ಟರವರೆಗೆ ಬಹುಪಾಲು ಕಾರ್ಯಗಳು ಆಂಗ್ಲ ಭಾಷೆಯಲ್ಲಿ ನಡೆದಿದ್ದು, ಹೊರಗಡೆ ನಿಧಾನವಾಗಿ ಮಾನ್ಯತೆ ಸಿಗುತ್ತಿರುವ ಈ ಸಂದರ್ಭದಲ್ಲಿ, ಸ್ಥಳೀಯವಾಗಿ ಅರಿವಿನ ಕೊರತೆ(Vacuum) ನಿರ್ಮಾಣವಾಗಬಾರದು. ಊರಿನ ಜನರಿಗೆ ನೇರವಾಗಿ ಮಾಹಿತಿಯನ್ನು ತಲುಪಿಸುವ ಹಾಗೂ ಸ್ಥಳೀಯ ಮಟ್ಟಕ್ಕೆ ಆದ್ಯತೆ ನೀಡುವ ಉದ್ದೇಶದಿಂದ, ಹಿರಿಯರು ಮತ್ತು ಮುಖಂಡರ ಸಲಹೆಯ ಮೇರೆಗೆ ‘ಕರ್ನಾಟಕದಲ್ಲಿ – ಕನ್ನಡದಲ್ಲಿ’ ಎಂಬ ಕಲ್ಪನೆಯಡಿ ಕೆಲಸ ಮಾಡುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಸುಳ್ಯ ಪರಿಸರದಲ್ಲಿ ಸಂಪೂರ್ಣ ಕನ್ನಡ ಭಾಷೆಯಲ್ಲಿ ‘ನಮ್ಮ ಮಣ್ಣಿನ ಇಂದಿನ ಮಕ್ಕಳೊಂದಿಗೆ'(Outreach) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವೈಯಕ್ತಿಕ ಇಚ್ಛೆ ಹೊಂದಿರುವುದಾಗಿ” ತಿಳಿಸಿದ್ದಾರೆ. 

ಈ ನಿಟ್ಟಿನಲ್ಲಿ ಟ್ರಸ್ಟಿಗಳು ಹಾಗೂ ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ವಿಚಾರದ ಕುರಿತು ಸ್ಪಷ್ಟತೆ ಹಾಗೂ ಗುರಿಗಳನ್ನು ಸಾರ್ವಜನಿಕವಾಗಿ ತಿಳಿಸುವ ಕಾರ್ಯವನ್ನು ಮುಂದೆ ಹಮ್ಮಿಕೊಳ್ಳುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading