ಆಷಾಢದಲ್ಲಿ 48 ದಿನಗಳ ವಿಶೇಷ ಆರಾಧನೆ: ಪೆರುವಾಜೆ ಜಲದುರ್ಗಾ ಕ್ಷೇತ್ರದ ಅಪರೂಪದ ಸಂಪ್ರದಾಯ| ಉದ್ಭವ ಶ್ರೀ ಜಲದುರ್ಗಾದೇವಿ–ಉದ್ಭವ ಶ್ರೀ ಮಹಾಗಣಪತಿಗೆ ಪ್ರತಿದಿನ ವಿಶೇಷ ಪೂಜೆ ; ಮಾಗಣೆ ಸೇರಿದಂತೆ ಕ್ಷೇತ್ರದ ಭಕ್ತರಿಂದ ಸೇವೆ ಸಮರ್ಪಣೆ

ಪೆರುವಾಜೆ: ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕಿನ 21 ಗ್ರಾಮಗಳ ಮಾಗಣೆ ಕ್ಷೇತ್ರವಾಗಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನವು ಜಾತ್ರೆ ಹಾಗೂ ನವರಾತ್ರಿ ಆಚರಣೆಗಳ ಜೊತೆಗೆ ಆಷಾಢ ಮಾಸದಲ್ಲಿಯೂ ವಿಶಿಷ್ಟ ಧಾರ್ಮಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದೆ.
ಪ್ರತಿವರ್ಷ ಆಷಾಢ ಮಾಸದಲ್ಲಿ 48 ದಿನಗಳ ಕಾಲ ನಿರಂತರವಾಗಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನೆರವೇರಿಸುವ ಸಂಪ್ರದಾಯ ಇಲ್ಲಿ ನಡೆಯುತ್ತಿದೆ. ಈ ವರ್ಷದ ವಿಶೇಷ ಪೂಜಾ ಕಾರ್ಯಕ್ರಮವು ಜುಲೈ 17ರಿಂದ ಸೆಪ್ಟೆಂಬರ್ 2ರವರೆಗೆ ನಡೆಯುತ್ತಿದ್ದು, ಪ್ರತಿದಿನ ಉದ್ಭವ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿಗೆ ವಿಶೇಷ ಹೋಮ, ಪೂಜೆ, ಅಲಂಕಾರ ಹಾಗೂ ಆರಾಧನೆ ನೆರವೇರುತ್ತಿದೆ.
ಆಷಾಢ ಮಾಸದಲ್ಲಿ ದೇವಿ ಹಾಗೂ ಗಣಪತಿಯ ಆರಾಧನೆಗೆ ವಿಶೇಷ ಮಹತ್ವವಿದೆ ಎಂಬ ನಂಬಿಕೆಯಿದ್ದು, ಈ ಸೇವೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರೆ ಇಷ್ಟಾರ್ಥ ಸಿದ್ಧಿ, ಆರೋಗ್ಯ, ಕುಟುಂಬದ ಕ್ಷೇಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ವಿಶ್ವಾಸ ಭಕ್ತರಲ್ಲಿದೆ. ಹೀಗಾಗಿ ವಿವಿಧ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉದ್ಭವ ಸಾನಿಧ್ಯವೇ ಕ್ಷೇತ್ರದ ವೈಶಿಷ್ಟ್ಯ
ಪೆರುವಾಜೆ ಶ್ರೀಕ್ಷೇತ್ರದ ಪ್ರಮುಖ ವೈಶಿಷ್ಟ್ಯವೆಂದರೆ ಉದ್ಭವ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿ ಸಾನಿಧ್ಯ. ಎರಡೂ ದೇವತಾ ಸಾನಿಧ್ಯಗಳು ಉದ್ಭವ ರೂಪದಲ್ಲಿ ಗೋಚರಿಸಿರುವುದು ಕ್ಷೇತ್ರದ ಮಹಿಮೆಯಾಗಿದೆ ಎಂಬ ನಂಬಿಕೆ ಇದೆ. ಶಿಲ್ಪಿಗಳಿಂದ ನಿರ್ಮಿಸಲ್ಪಟ್ಟ ಮೂರ್ತಿಗಳ ಬದಲಾಗಿ ಶಿಲೆಯಲ್ಲಿಯೇ ದೇವತಾ ರೂಪಗಳು ಉದ್ಭವಗೊಂಡಿವೆ ಎಂದು ಕ್ಷೇತ್ರದ ಭಕ್ತರು ನಂಬುತ್ತಾರೆ.
ಈ ಹಿನ್ನೆಲೆಯಲ್ಲಿ ಆಷಾಢದ 48 ದಿನಗಳ ವಿಶೇಷ ಆರಾಧನೆಯಲ್ಲಿ ದೇವಿ ಹಾಗೂ ಗಣಪತಿಗೆ ಸಮಾನ ಮಹತ್ವ ನೀಡಲಾಗುತ್ತಿದ್ದು, ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಿರಂತರವಾಗಿ ನಡೆಯುತ್ತಿದೆ.
ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ
48 ದಿನಗಳ ವಿಶೇಷ ಪೂಜೆಯಲ್ಲಿ ಭಕ್ತರು ತಮ್ಮ ಹೆಸರಿನಲ್ಲಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಸಿಸಬಹುದಾಗಿದೆ. ರೂ.300 ಸೇವಾಶುಲ್ಕ ನೀಡಿ ಮುಂಚಿತವಾಗಿ ರಶೀದಿ ಪಡೆದು ಸೇವೆ ಸಲ್ಲಿಸುವ ದಿನವನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನವರಾತ್ರಿ ಮಹೋತ್ಸವಕ್ಕೆ ಮುನ್ನುಡಿ
ಮನೆಮನೆಯ ಬಲಿವಾಡು ಸಮರ್ಪಣೆ, 10 ಅಥವಾ 11 ದಿನಗಳ ವಿಶಿಷ್ಟ ನವರಾತ್ರಿ ಆಚರಣೆ, ಮಲ್ಲಿಗೆ ಶಯನೋತ್ಸವ ಸೇರಿದಂತೆ ಹಲವು ಅಪರೂಪದ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ಕ್ಷೇತ್ರಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಆಷಾಢ ಮಾಸದ 48 ದಿನಗಳ ವಿಶೇಷ ಪೂಜೆಯು ನವರಾತ್ರಿ ಮಹೋತ್ಸವಕ್ಕೆ ಮುನ್ನುಡಿಯಂತಾಗಿದೆ.
“ಪೆರುವಾಜೆ ಶ್ರೀ ಜಲದುರ್ಗಾದೇವಿ ಕ್ಷೇತ್ರವು ನವರಾತ್ರಿ ಆಚರಣೆಯಷ್ಟೇ ಅಲ್ಲ, ಆಷಾಢ ಮಾಸದಲ್ಲಿಯೂ ತನ್ನದೇ ಆದ ವಿಶಿಷ್ಟ ಧಾರ್ಮಿಕ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಸತತ 48 ದಿನಗಳ ಕಾಲ ಶ್ರೀ ಗಣಪತಿ ಹೋಮ ಹಾಗೂ ಶ್ರೀ ದುರ್ಗಾಪೂಜೆ ನಡೆಯುವುದು ಕ್ಷೇತ್ರದ ಅಪರೂಪದ ವೈಶಿಷ್ಟ್ಯವಾಗಿದೆ. ಆಷಾಢ ಮಾಸದಲ್ಲಿ ದೇವಿ ಹಾಗೂ ಗಣಪತಿಯ ಆರಾಧನೆಗೆ ವಿಶೇಷ ಮಹತ್ವವಿದ್ದು, ಈ ಸೇವೆಯಲ್ಲಿ ಭಕ್ತಿಯಿಂದ ಭಾಗವಹಿಸಿದವರಿಗೆ ಇಷ್ಟಾರ್ಥ ಸಿದ್ಧಿ, ಕುಟುಂಬದ ಕ್ಷೇಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕ್ಷೇತ್ರದ ಮೇಲಿನ ಭಕ್ತರ ನಂಬಿಕೆಗೆ ಸಾಕ್ಷಿಯಾಗಿದೆ” ಎಂದು ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading