ಕೊಲ್ಲಮೊಗ್ರು: ವಿದ್ಯಾರ್ಥಿಗಳ ಹಾಗೂ ಪೋಷಕರ ಸಮನ್ವಯ ಕಾರ್ಯಾಗಾರ “ಅನುಬಂಧ” ; “ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸಬೇಡಿ, ಜೀವನಕ್ಕೆ ಸಿದ್ಧಪಡಿಸಿ” : ಲೋಕೇಶ್ ಪೀರನಮನೆ

“ಮಕ್ಕಳಿಗೆ ಅಂಕಗಳಿಗಿಂತ ಬದುಕುವ ವಿವೇಕ ಹಾಗೂ ಆತ್ಮವಿಶ್ವಾಸ ಮುಖ್ಯವಾಗಿದ್ದು, ಪೋಷಕರು ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸದೆ ಜೀವನಕ್ಕೆ ಸಿದ್ಧಪಡಿಸಬೇಕು” ಎಂದು ತರಬೇತುದಾರ ಲೋಕೇಶ್ ಪೀರನಮನೆ ಹೇಳಿದರು. ಬಂಗ್ಲೆಗುಡ್ಡೆ ಸ.ಹಿ‌.ಪ್ರಾ ಶಾಲಾ ವಠಾರದಲ್ಲಿ ಆ.09ರಂದು ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯ 9ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ “ಅನುಬಂಧ” ಎಂಬ ವಿಶೇಷ ಸಮನ್ವಯ ಕಾರ್ಯಾಗಾರದಲ್ಲಿ ಅವರು ವಿಷಯ ಮಂಡಿಸಿ ಮಾತನಾಡಿದರು. “ಇಂದಿನ ಕಾಲಘಟ್ಟದಲ್ಲಿ ಅಂಕಗಳಿಗಿಂತ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜೀವನ ಕೌಶಲ್ಯ ಅತ್ಯಗತ್ಯವಾಗಿದ್ದು, ಮನೆಯಲ್ಲಿ ಪೋಷಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಮಕ್ಕಳಿಗೆ ಮಾದರಿಯಾಗಬೇಕು. ಮಕ್ಕಳಿಗೆ ಕುಟುಂಬದ ನಿಜವಾದ ಪರಿಸ್ಥಿತಿಯ ಅರಿವು ಮೂಡಿಸಿದಾಗ ಮಾತ್ರ ಅವರು ಜವಾಬ್ದಾರಿಯುತ ಪ್ರಜೆಗಳಾಗಿ ಬೆಳೆಯಲು ಸಾಧ್ಯ. ಮಕ್ಕಳು ಕೇವಲ ಶಾಲೆಯ 15-20 ಮಕ್ಕಳ ನಡುವೆ ಟಾಪರ್ ಆಗುವುದಷ್ಟೇ ಅಲ್ಲ, ರಾಜ್ಯಮಟ್ಟದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಲು ಸಿದ್ಧರಾಗಬೇಕು” ಎಂದ ಅವರು ಧಾನ್ಯಗಳನ್ನು ಆರಿಸುವ ಉದಾಹರಣೆಯ ಮೂಲಕ “ಜೀವನದಲ್ಲಿ ನಾವು ಯಾವುದರ ಮೇಲೆ ಹೆಚ್ಚು ಫೋಕಸ್ ಮಾಡುತ್ತೇವೋ ಅದುವೇ ನಮಗೆ ಕಾಣಿಸುತ್ತದೆ. ನಕಾರಾತ್ಮಕ ವಿಚಾರಗಳ ಬದಲು ಧನಾತ್ಮಕ ವಿಚಾರಗಳತ್ತ ಗಮನ ಹರಿಸಬೇಕು” ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಕೆ.ವಿ.ಜಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಮಲಾಕ್ಷ ಗೌಡ ಮುಳ್ಳುಬಾಗಿಲು ಹಾಗೂ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಪಿ.ಕೆ ಉದ್ಘಾಟಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬೊಳಿಯಪ್ಪ ಪೈಕ, ಬಾಲಸುಬ್ರಹ್ಮಣ್ಯ ಎನ್.ಜಿ ಹಾಗೂ ಶಾಲಾ ಶಿಕ್ಷಕವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮೀಶ್ ಶಿರೂರು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.  (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading