ಆಲೆಟ್ಟಿ ಹಾಗೂ ಅಜ್ಜಾವರ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳ ಹಿಂಡು ಕೃಷಿಕರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ನಾಶಪಡಿಸುತ್ತಿದೆ. ಜು.24 ರಂದು ರಾತ್ರಿ ಮತ್ತೆ ತುದಿಯಡ್ಕ ಕೃಪಾಶಂಕರ, ಬಿಸಿಲುಮಲೆ ನಾಗರಾಜ ಭಟ್, ಜನಾರ್ಧನ ಭಟ್, ರಾಮನಾರಾಯಣ ಬೆಳ್ಳಪಾರೆ, ಚಳ್ಳಂಗಾರು ಬಾಬು ಗೌಡ ಮುಂತಾದವರ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿ ಬೆಳೆಯನ್ನು ನಾಶಪಡಿಸಿದೆ ಎಂದು ತಿಳಿದು ಬಂದಿದೆ. ಹಲವಾರು ದಿನಗಳಿಂದಲೂ ನಿರಂತರವಾಗಿ ಆಲೆಟ್ಟಿ-ಅಜ್ಜಾವರ ಗ್ರಾಮದ ಹಲವು ಕಡೆಗಳಲ್ಲಿ ತೋಟವನ್ನು ನಾಶಪಡಿಸುತ್ತಿರುವ ಘಟನೆ ಹೆಚ್ಚಾಗುತ್ತಲೇ ಇದೆ. ರೈತರು ಕೊರೊನಾ ಭಯದ ಮಧ್ಯೆ ಆನೆ ದಾಳಿಯಿಂದ ಕೃಷಿ ರಕ್ಷಿಸುವ ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ. ಇಲಾಖೆ ಮಾತ್ರ ಮೌನ ವಹಿಸಿದೆ.
ಈ ಭಾಗದ ಕೃಷಿಕರೇ ಸೇರಿಕೊಂಡು ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಆನೆಗಳು ಯಾವ ಭಾಗದಲ್ಲಿ ಇದೆ ಎಂಬ ಮಾಹಿತಿ ಸಂಗ್ರಹಿಸಿ ತಾವೆ ಸ್ವತಃ ರಾತ್ರಿಯೆಲ್ಲ ನಿದ್ದೆ ಬಿಟ್ಟು ತಮ್ಮ ತಮ್ಮ ತೋಟಕ್ಕೆ ದಾಳಿ ಮಾಡದಂತೆ ಜಾಗರಣೆ ಮಾಡುವಂತಾ ಪರಿಸ್ಥಿತಿಯಲ್ಲಿ ಬಂದಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಸುಳಿಯದೆ ಇರುವುದು ದುರದೃಷ್ಟಕರ. ತಕ್ಷಣ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡು ಆನೆಗಳ ಕಡಿವಾಣಕ್ಕೆ ಶಾಶ್ವತ ಪರಿಹಾರದ ವ್ಯವಸ್ಥೆ ಮಾಡಬೇಕೆಂದು ಹಾಗೂ ಕೃಷಿ ಹಾನಿಗೊಳಗಾದ ರೈತರಿಗೆ ಪರಿಹಾರ ಧನವನ್ನು ನೀಡಬೇಕೆಂದು ಸಂಕಷ್ಟದಲ್ಲಿರುವ ಈ ಭಾಗದ ಕೃಷಿಕರು ಆಗ್ರಹಿಸುತಿದ್ದಾರೆ.