ತನಗೆ ಸ್ವಂತ ಜಾಗವಿದ್ದರೂ ಹಲವಾರು ವರ್ಷಗಳಿಂದಲೂ ರಸ್ತೆ ಬದಿ, ಬಸ್ ನಿಲ್ದಾಣದಲ್ಲಿ ಮಲಗುತ್ತಾ , ಅಲ್ಲೇ ಅನ್ನಾಹಾರ ತಯಾರಿಸುತ್ತಿದ್ದ ಪಂಜ ಗ್ರಾಮದ ಮಹಿಳೆಯೊಬ್ಬರಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ನೇತೃತ್ವದಲ್ಲಿ ಒಂದು ಸೂರು ಕಲ್ಪಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಂಜ ಗ್ರಾಮದ ನಾಯರ್ ಕೆರೆ ಚಂದ್ರಾವತಿ ಎಂಬ ಮಹಿಳೆಯೇ ಈ ಸ್ಥಿತಿಗೆ ತಲುಪಿದ್ದು.ಅವಿವಾಹಿತ ರಾಗಿರುವ ಮಹಿಳೆಗೆ ಅವರದ್ದೇ ಸ್ವಲ ಜಾಗ ಇದೆ, ತಮ್ಮಂದಿರೂ ಇದ್ದಾರೆ. ಆದರೆ ಇದುವರೆಗೆ ಅವರಿಗೊಂದು ಇರಲು ಸೂರು ಇರಲಿಲ್ಲ, ಕೆಲ ದಿನ ತಮ್ಮಂದಿರ ಮನೆಯಲ್ಲಿ ಕೂತರೂ ಮತ್ತೆ ರಸ್ತೆ ಬದಿಯೇ ಇರುವುದು ಅವರ ದಿನಚರಿಯಾಗಿತ್ತು. ಇವರ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವ ಆಡಳಿತಾಧಿಕಾರಿಗಳಿಗೆ ಮಹಿಳೆಗೊಂದು ಸ್ವಂತ ನೆಲೆ ಕಲ್ಪಿಸುವ ಬಗ್ಗೆ ಯೋಜನೆ ಹಾಕಿಕೊಂಡರು. ಏಕಾಂಗಿ ಮಹಿಳೆಯಾಗಿರುವುದರಿಂದ ಯಾವುದೇ ಸಮಸ್ಯೆ ಎದುರಾಗದಂತೆ ಅವರು ಸುಬ್ರಹ್ಮಣ್ಯದ ಮಹಿಳಾ ಎಸ್ಸೈ ಓಮನ ಅವರ ಸಲಹೆ ಪಡೆದು ಮಹಿಳೆಯ ಮನವೊಲಿಸಿ ಅವರ ಜಾಗದಲ್ಲೇ ಮನೆ ಕಟ್ಟಿಕೊಡುವ ಬಗ್ಗೆ ಒಪ್ಪಿಗೆ ಪಡೆದುಕೊಂಡರು. ಆದರೆ ಮಹಿಳೆ ಮನೆ ಕಟ್ಟಲು ಅಭ್ಯಂತರವಿಲ್ಲ, ಖರ್ಚಾದ ಹಣ ತಾನೇ ನೀಡುವುದಾಗಿ ಷರತ್ತು ಹಾಕಿದ್ದರು. ಅವರ ಒಪ್ಪಿಗೆ ಸಿಗುತ್ತಲೇ ಕೆಲವೇ ದಿನದಲ್ಲೇ ಪುಟ್ಟದೊಂದು ಮನೆ ಸಿದ್ಧವಾಗಿ ಜು. 23 ರಂದು ಗೃಹ ಪ್ರವೇಶ ನೆರವೇರಿತು.
ಈ ವೇಳೆ ಸುಬ್ರಹ್ಮಣ್ಯ ಎಸ್ಸೈ ಓಮನ, ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು, ಪಂಜ ಪಂಚಲಿಂಗೇಶ್ವರ ದೇಗುಲದ ಅರ್ಚಕರಾದ ನಾಗರಾಜ್ ಭಟ್, ಮನೆಕಟ್ಟುವಲ್ಲಿ ಶ್ರಮಿಸಿದ ಕಾರ್ಮಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.