ಕೊರೋನ ಭಯದಿಂದ ಅಲ್ಲೋಲ ಕಲ್ಲೋಲವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣದಿಂದ ವಂಚಿತವಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳ ಹಿತದೃಷ್ಟಿಯಿಂದ ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರ ಅಪೇಕ್ಷೆ ಮೇರೆಗೆ ಶಾಲಾ ಶಿಕ್ಷಕಿ ಶ್ರೀಮತಿ ಶ್ವೇತಾ ಅವರಿಂದ ವಿಶೇಷ ಶಿಕ್ಷಣ ವ್ಯವಸ್ಥೆ ಆರಂಭವಾಗಿರುವುದು ಪ್ರಯೋಗ ಶೀಲ ಹಾಗೂ ಪ್ರಶಂಸನೀಯವಾಗಿದೆ.
ಸದ್ಯಕ್ಕೆ ತರಗತಿ ಕಲಿಕೆ ಸಾಧ್ಯವಿಲ್ಲ ಆನ್ ಲೈನ್ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಫೋನ್ ನೆಟವರ್ಕ್ ಸಿಗದ ಗ್ರಾಮೀಣ ಭಾಗಗಳಲ್ಲಿ ಅದನ್ನು ಜಾರಿಗೊಳಿಸುವ ಬಗೆ ಹೇಗೆ? ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅದು ಕೂಡಾ ಎಷ್ಟರ ಮಟ್ಟಿಗೆ ಯಶಸ್ವಿಯಾಗಲು ಸಾಧ್ಯ? ಈ ಎಲ್ಲಾ ವಿಚಾರಗಳು ಮೊದಲ ಪೋಷಕರ ಸಭೆಯಲ್ಲಿ ಚರ್ಚಿತವಾಗುತ್ತಿದ್ದಂತೆ ಹೊಸ ರೀತಿಯ ಶಿಕ್ಷಣದ ರೂಪ ರೇಷೆಗೆ ಅನುವಾದರು. ಈ ಹಿಂದೆ ಕಲಿತದ್ದನ್ನು ಮರೆಯದೆ ಹೊಸ ವಿಚಾರಗಳು ಹಾಗೂ ತರಗತಿ ಪಾಠಗಳನ್ನು ಮಕ್ಕಳು ಕಲಿತುಕೊಳ್ಳುಲು ನೂತನ ಯೋಜನೆ ಶಿಕ್ಷಕಿಯಿಂದ ಸಿದ್ಧವಾಯಿತು.
ಈಗಾಗಲೇ ಪಾಠ ಪುಸ್ತಕಗಳು ಆನ್ ಲೈನಿನಲ್ಲಿ ಲಭ್ಯವಾಗಿರುವುದರಿಂದ ಶಿಕ್ಷಕಿ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ಪ್ರತಿ ಪಾಠಕ್ಕೆ ವಾರಕ್ಕೆ ಒಂದು ಅಥವಾ ಎರಡು ಪಿರಿಯಡ್ ನಂತೆ ಪಾಠ ವಿಷಯದ ಮುಖ್ಯಾಂಶಗಳನ್ನು ಸ್ಮಾರ್ಟ್ ಫೋನ್ ಮೂಲಕ ಇರುವವರಿಗೆ ತಿಳಿಸುವುದು. ಮೊಬೈಲ್ ಫೋನ್ ಕೂಡ ಇಲ್ಲದ ಪೋಷಕರು ವಾರಕ್ಕೆ ಒಂದಾವರ್ತಿ ಶಾಲೆಗೆ ಬಂದು ವಾರದ ಕಲಿಕೆಯನ್ನು ತಿಳಿದುಕೊಂಡು ಮಕ್ಕಳಿಂದ ಮಾಡಿಸುವುದು. ಇವಿಷ್ಟು ಈಗಾಗಲೇ ಜಾರಿಯಲ್ಲಿವೆ. ಇದಕ್ಕೆ ಪೂರಕವಾಗಿ ಶಿಕ್ಷಕಿ ದಾನಿಗಳ ನೆರವಿನಿಂದ ಸಾವಿರಾರು ರೂಪಾಯಿಗಳ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸುವ ವ್ಯವಸ್ಥೆ ಮಾಡಿದ್ದಾರೆ.
ನಲಿ ಕಲಿ ಮಕ್ಕಳಿಗೆ ಪೂರಕ ಪ್ರಿಂಟೆಡ್ ಕನ್ನಡ, ಇಂಗ್ಲಿಷ್ ಕಾಪಿ ಪುಸ್ತಕಗಳನ್ನು ಉಚಿತವಾಗಿ ಕೊಡಿಸಿದ್ದಾರೆ.
ಆನ್ ಲೈನ್ನಲ್ಲಿ ಪೋಷಕರು ಕಳಿಸುವ ಬರಹಗಳನ್ನು ತಿದ್ದಿ ತಿಳಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಅಲ್ಲದೆ ಅವಶ್ಯಕತೆ ಇರುವವರಿಗೆ ಪಠ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸುವ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಹಿಂದೊಮ್ಮೆ ಕೇವಲ 5-6 ಮಕ್ಕಳನ್ನು ಹೊಂದಿದ್ದು ಮುಚ್ಚುವ ಭೀತಿಯಲ್ಲಿದ್ದ ಈ ಶಾಲೆಯಲ್ಲಿ ಈಗ 25 ಮಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ನಾಗರಿಕ ಸಂಸ್ಕಾರಗಳನ್ನು ಹೇಳಿಕೊಡಲಾಗುತ್ತಿದೆ. ಶಾಲೆಯ ಎಲ್ಲಾ ರಾಷ್ಟ್ರೀಯ ಹಬ್ಬಗಳು ಹಾಗೂ ಶಾಲಾ ಪ್ರತಿಭಾ ದಿನೋತ್ಸವಗಳಲ್ಲೂ ಬಹುತೇಕ ಪೋಷಕರು ಭಾಗವಹಿಸುತ್ತಿದ್ದಾರೆ. ಆ ದಿನಗಳಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿವೆ. ಒಂದು ಹಿರಿಯ ಪ್ರಾಥಮಿಕ ಶಾಲೆಗೆ ಬೇಕಾದಷ್ಟು ದೊಡ್ಡ ಆಟದ ಮೈದಾನವಿದ್ದು ಮಕ್ಕಳಿಗೆ ಹಾಗೂ ಹಿರಿಯ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಕೇಂದ್ರವಾಗಿದೆ. ಮಕ್ಕಳಿಗೆ ಬೇಕಾದ ಆಟೋಟ ಸಾಮಗ್ರಿಗಳನ್ನು ದಾನಿಗಳ ಮೂಲಕ ವ್ಯವಸ್ಥೆ ಕೂಡಾ ಮಾಡಲಾಗಿದೆ. ಆಂಗ್ಲಭಾಷಾ ಕಲಿಕೆಗೆ ವಿಶೇಷ ಗಮನ ಕೊಡಲಾಗಿದ್ದು ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳೂ ತಿರುಗಿ ಈ ಶಾಲೆಯಲ್ಲಿ ದಾಖಲಾದ ಉದಾಹರಣೆಗಳಿವೆ.
ಅಕ್ಕ ಪಕ್ಕದ ಶಾಲೆಗಳ ಮಕ್ಕಳಿಗೂ ಇದು ಆಕರ್ಷಣೆಯ ಕೇಂದ್ರವಾಗಿದೆ. ರಸ್ತೆ ಬದಿ ತಡೆ ಗೋಡೆ ರಚನೆಯಾಗಿದ್ದು ಮಕ್ಕಳ ಸುರಕ್ಷತೆಗೆ ಯಾವುದೇ ಭಯವಿಲ್ಲ. ಎಲ್ಲಾ ಮಕ್ಕಳಿಗೂ ಕುಳಿತುಕೊಳ್ಳಲು ಪೀಠೋಪಕರಣ ವ್ಯವಸ್ಥೆಯನ್ನು ಶಾಲಾ ಶಿಕ್ಷಕಿ, ಶಾಲಾಭಿವೃದ್ಧಿ ಸಮಿತಿ, ಊರ ಪರವೂರಾ ದಾನಿಗಳಿಂದ ಮಾಡಲಾಗಿದೆ. ಇದೀಗ ಮುಂದಾಲೋಚನೆಯಿಂದ ಮಾಡಿರುವ ಈ ಶಿಕ್ಷಣ ವ್ಯವಸ್ಥೆಯು ಒಂದು ಮಾದರಿ ವ್ಯವಸ್ಥೆ ಎನ್ನಲಡ್ಡಿಯಿಲ್ಲ. ಶಿಕ್ಷಕರು,ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬರಹ : ಬಾಬು ಗೌಡ. ಎ ( ವಿಶ್ರಾಂತ ಪ್ರಾಚಾರ್ಯರು )
ಅಧ್ಯಕ್ಷರು, ಶಾಲಾ ಹಿತರಕ್ಷಣಾ ಸಮಿತಿ, ಅಚ್ರಪ್ಪಾಡಿ ಸುಳ್ಯ.