ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಟ್ಲ ಫೌಂಡೇಶನ್ ವತಿಯಿಂದ ಎಣ್ಮೂರು ಪ್ರೌಢಶಾಲೆಯಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ಆಗಸ್ಟ್ 30ರಂದು ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಉಮೇಶ್ ಶೆಟ್ಟಿ ಉಬರಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಿಕೆಯಿಂದ ಶಾಲಾ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದು ನಮ್ಮಲ್ಲಿ ಏಕಾಗ್ರತೆ ವೃದ್ಧಿಸಿ ಕಲಿಕೆಯನ್ನು ದೃಢೀಕರಿಸುತ್ತದೆ ಎಂದು ಹೇಳಿದರು. ಹಿರಿಯ ಯಕ್ಷಗಾನ ಅರ್ಥಧಾರಿ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಎಂ.ಎಲ್ ಸಾಮುಗ ರವರು ಯಕ್ಷಗಾನ ಕಲಿಕೆಯಿಂದ ಪುರಾಣ ಜ್ಞಾನ ,ಭಾಷಾ ಶುದ್ಧಿ ಹಾಗೂ ಉತ್ತಮ ಸಂವಹನ ಕೌಶಲ ಬೆಳೆಯುತ್ತದೆ. ಇದು ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕ ಎಂದರು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಕುಮಾರಿ ಜಾನಕಿ ಎಸ್, ಯಕ್ಷ ಶಿಕ್ಷಣದ ಸಂಚಾಲಕರಾದ ಶ್ರೀ ವಾಸು ಐತಾಳ್, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಗೌಡ ಪೂದೆ, ಯಕ್ಷ ಗುರು ಶ್ರೀ ಪ್ರಸಾದ ಸವಣೂರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಅತಿಥಿಗಳನ್ನು ಸ್ವಾಗತಿಸಿದರು. ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಪುತ್ತೂರು ಘಟಕದ ಸಂಚಾಲಕರಾದ ಶ್ರೀ ಪ್ರಶಾಂತ ರೈ ಪಲ್ಲೋಡಿ ವಂದಿಸಿದರು. ಶಿಕ್ಷಕ ಶ್ರೀ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಭಕ್ತಿ ಗೌಡ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆರಂಭಿಕ ಹೆಜ್ಜೆಯನ್ನು ಅಭ್ಯಾಸ ಮಾಡುವುದರ ಮೂಲಕ ವಿದ್ಯಾರ್ಥಿಗಳು ನಾಟ್ಯ ತರಬೇತಿ ಪಡೆದರು.
- Saturday
- November 23rd, 2024