✍️ ಭಾಸ್ಕರ ಜೋಗಿಬೆಟ್ಟು
ತುಳುನಾಡಿನ ನಾಗರಾಧನೆಗೂ ಬೇರೆ ಪ್ರದೇಶಗಳಲ್ಲಿ ಆಚರಿಸುವ ನಾಗರಾಧನೆಗೂ ಅಜಗಜಾಂತರ ವ್ಯತ್ಯಾಸ ಇದೆ. ಇಲ್ಲಿ ಭೂಮಿಯ ಒಡೆಯ ದೈವ ನಾಗ ಬೆರ್ಮರ ಆರಾಧನೆ ನಡೆಯುತ್ತದೆ. ನಮ್ಮ ತುಳುನಾಡಿನಲ್ಲಿ ಪುರಾತನ ಕಾಲದಿಂದಲೂ ಇಲ್ಲಿನ ಆದಿ ಜನಾಂಗದವರು ಭಯ ಭಕ್ತಿಯಿಂದ ನಾಗನನ್ನು ದೈವಗಳ ರೂಪದಲ್ಲಿ ಆರಾಧಿಸಿಕೊಂಡು ಬಂದರು. ದೈವಗಳನ್ನು , ನಾಗನನ್ನು ಚಾವಡಿ, ಗುಡಿಗಳಲ್ಲಿ ಆರಾಧಿಸದೆ ಬನಗಳೆಂಬ ಪ್ರಕೃತಿಯ ಮಡಿಲಲ್ಲಿ ಆರಾಧಿಸುತ್ತಾ ಬಂದರು. ಆದರೆ ಇತ್ತೀಚಿನ ದಿನಗಳಲ್ಲಿ ನಾಗ ಬನಗಳು ನಾಗನ ಕಟ್ಟೆಗಳಾಗಿ ಬದಲಾವಣೆ ಆಗಿರುವುದು ವಿಪರ್ಯಾಸ …!!!
ಹಿಂದಿನ ಕಾಲದಲ್ಲಿ ನಾಗನಿಗೆ ಹಾಲು ,ತುಪ್ಪ , ಎಲೆ ನೀರು ಎರೆಯುವ ಪದ್ಧತಿ ಇರಲಿಲ್ಲ. ಬದಲಾಗಿ ದೈವಗಳ ಆರಾಧಿಸುವ ರೀತಿಯಲ್ಲಿ ಸರಳವಾಗಿ ಪೂಜಿಸುತ್ತಿದ್ದರು.
ನಾಗ ಬನಗಳು ಹೇಗಿರುತ್ತದೆ ?
ನಾಗ ಬನಗಳು ಕಾಡು ಪ್ರದೇಶಗಳಲ್ಲಿ, ನಿರಂತರವಾಗಿ ಹರಿಯುವ ನೀರಿನ ಝರಿಗಳ ಪಕ್ಕದಲ್ಲಿ , ನಾಗನಿಗೆ ವಾಸ ಮಾಡಲು ಯೋಗ್ಯವಾದ ಪ್ರದೇಶದಲ್ಲಿ ನಾಗ ಬನವಿರುತ್ತದೆ . ಹೆಚ್ಚಾಗಿ ನಾಗ ಬನದಲ್ಲಿ ಹುತ್ತವಿದ್ದು, ಸುತ್ತಲೂ ಮರಗಿಡಗಳು, ಔಷಧ ಗಿಡಗಳಿಂದ ಕೂಡಿರುತ್ತದೆ. ನಾಗ ಬನದ ಹತ್ತಿರ ಯಾರು ಪ್ರವೇಶ ಮಾಡದೆ ವರ್ಷಕ್ಕೊಂದು ಬಾರಿ ನಾಗ ಬನದ ಹತ್ತಿರ ಹೋಗಿ ಅಲ್ಲಿ ಬಿದ್ದಿರುವ ಮರ ಗಿಡಗಳ ಕೊಂಬೆಗಳನ್ನು ತೆಗೆದು ಸ್ವಚ್ಛ ಮಾಡಿ ಪ್ರಾರ್ಥನೆ ಮಾಡಿ ಬರುವುದು ಪದ್ಧತಿ. ತದನಂತರ ತಮ್ಮ ಕೃಷಿ ಚಟುವಟಿಕೆಗಳ ನಡುವೆ ತಮ್ಮ ಭೂಮಿಯಲ್ಲಿ ಹೆಚ್ಚು ಹೆಚ್ಚು ಫಸಲು ಬರಬೇಕು , ಕೃಷಿ ಚಟುವಟಿಕೆ ಇನ್ನಷ್ಟು ಚುರಕು ಆಗಬೇಕು ಎಂಬ ಉದ್ದೇಶದಿಂದ ನಾಗನಿಗೆ ಒಂದು ಕೊಂಡೆ ಹಾಲು , ಎಲೆ ನೀರು ಎರೆಯುವುದು ರೂಢಿಯಾಯಿತು.
ಆದರೆ ಇತ್ತೀಚಿನ ವರ್ಷಗಳಲ್ಲಿ ನಾಗರಾಧನೆಯು ಸಂಪೂರ್ಣವಾಗಿ ಆಧುನೀಕರಣಗೊಂಡಿರುವುದನ್ನು ಕಾಣಬಹುದು. ಬನಗಳು ಕಟ್ಟೆಗಳಾಗಿ ಮಾರ್ಪಟ್ಟು ಅವುಗಳಲ್ಲಿ ನಾಗನಿಗೆ ವಾಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸರ್ವೇ ಸಾಮಾನ್ಯ. ಯಾಕೆಂದರೆ ಸುತ್ತಲೂ ಇಂಟರ್ಲಾಕ್ ಹಾಕಿ ಕಾಂಕ್ರೀಟ್ ಮಾಡಿ ಕಟ್ಟೆ ಕಟ್ಟುವುದರಿಂದ ಬೇಸಿಗೆ ಕಾಲದ ಸುಡು ಬಿಸಿಲಿನಲ್ಲಿ ವಾಸ ಮಾಡಲು ಸಾಧ್ಯವೇ..!! ಅದೂ ಅಲ್ಲದೆ ನಾಗನಿ ವಿಶೇಷ ತಂಬಿಲ , ಸೇವೆಗಳು, ಆಶ್ಲೇಷ ಬಲಿ ಪೂಜೆಗಳು, ನಾಗ ಮಂಡಲದಂತಹ ದುಬಾರಿ ಆಚರಣೆಗಳು ಆರಂಭವಾಗಿದೆ. ನಾಗರ ಪಂಚಮಿಯಂದು ನಾಗನ ಕಟ್ಟೆಗೆ ಲೀಟರ್ ಗಟ್ಟಲೆ ಹಾಲು , ಎಲೆ ನೀರು ಎರೆದರೆ ನಾಗ ನಿಲ್ಲುವನೆ? ನಾಗನ ಕಟ್ಟೆಗೆ ಎರೆದ ಹಾಲನ್ನು ತೀರ್ಥರೂಪದಲ್ಲಿ ಜನರಿಗೆ ಕೊಡುತ್ತಾರೆ..!!
ಒಟ್ಟಿನಲ್ಲಿ ನಮ್ಮ ತುಳುನಾಡಿನ ಸಂಸ್ಕೃತಿ ಸ್ಥಿತ್ಯಂತರ ಆಗಿರುವುದು ಮಾತ್ರ ಸುಳ್ಳಲ್ಲ. ಇಂತಹ ಅಮೂಲ್ಯವಾದ ಆಚರಣೆಗಳನ್ನು ನಾವು ರಕ್ಷಣೆ ಮಾಡಬೇಕಾಗಿದೆ. ಆಧುನೀಕರಣ, ಆಡಂಭರಕ್ಕೆ ಮಾರು ಹೋಗದೆ ಮೂಲ ತತ್ವಗಳನ್ನು ಸಂರಕ್ಷಣೆ ಪಾಲನೆ ,ಪೋಷಣೆ ಮಾಡಬೇಕಾಗಿದೆ.