ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮವನ್ನು 2023ರ ಮುಂಗಾರು ಹಂಗಾಮಿಗೆ ಅನ್ವಯಿಸಿ ವಿಮೆ ಪಾವತಿಸಲು ಆಗಸ್ಟ್ 7 ರ ವರೆಗೆ ಅವಕಾಶ ನೀಡಲಾಗಿದೆ ಎಂದು ಸುಳ್ಯ ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವನ್ನು ಕಲ್ಪಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದ್ದು, 2023ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜು.31 ಅಂತಿಮ ದಿನವಾಗಿತ್ತು. ಇದೀಗ ಆಗಸ್ಟ್ 7 ರ ತನಕ ಅವಧಿ ವಿಸ್ತರಿಸಲಾಗಿದ್ದು ಕೃಷಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.