ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ಶಿಕ್ಷೆ ನೀಡಿ ಆದೇಶಿಸಿದೆ.
ದುಗಲಡ್ಕ ನಿವಾಸಿ ಸುಳ್ಯದ ಮರದ ವ್ಯಾಪಾರಿ ಮಹಮ್ಮದ್ ಅಶ್ರಫ್ ಎಂಬವರು ದಿನಾಂಕ 01/01/2019 ರಂದು ನೆಲ್ಲೂರು ಕೆಮ್ರಾಜೆ ಗ್ರಾಮದ ಜಬಳೆ ಸೋಮಶೇಖರ್ ನಾಯಕ್ ಎಂಬವರ ಮನೆಗೆ ಪಿಕಪ್ ವಾಹನದಲ್ಲಿ ಧಾವಿಸಿ, ಸುಲಿದು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಸುಮಾರು 1,363 ಕೆ,ಜಿ ಅಡಿಕೆಯನ್ನು ಅವರಿಂದ ಖರೀದಿಸಿದ್ದರು, ಸದ್ರಿ ಅಡಿಕೆಯ ಅಂದಿನ ಮಾರುಕಟ್ಟೆ ಮೌಲ್ಯ ರೂಪಾಯಿ 4,25,000 ಆಗಿದ್ದು ಪ್ರತಿಫಲ ಮೊತ್ತವನ್ನು ನಗದಿನ ಮೂಲಕ ಪಾವತಿಸುವುದರ ಬದಲು ಸಿಂಡಿಕೇಟ್ ಬ್ಯಾಂಕ್ ನ ಸುಳ್ಯ ಶಾಖೆಯ ಚೆಕ್ ನೀಡಿ ಅದರಲ್ಲಿ ಸಾಕಷ್ಟು ಮೊತ್ತ ಇರುವುದಾಗಿ ನಂಬಿಸಿದ್ದರು. ಆದರೆ ಸದ್ರಿ ಸೋಮಶೇಖರ ನಾಯಕ್ ರವರು ಆರೋಪಿಯು ನೀಡಿದ ಚೆಕ್ ಅನ್ನು ತಾನು ಖಾತೆ ಹೊಂದಿರುವ ಕೆನರಾ ಬ್ಯಾಂಕ್ ಸುಳ್ಯ ಶಾಖೆಯಲ್ಲಿ ನಗದಿಕರಣಕ್ಕಾಗಿ ಹಾಜರು ಪಡಿಸಿದ್ದರು, ಆದರೆ ಸದ್ರಿ ಚೆಕ್ ಅಶ್ರಫ್ ಅವರ ಖಾತೆಯಲ್ಲಿ ಹಣವಿಲ್ಲದ ಕಾರಣ ಅಮಾನ್ಯಗೊಂಡಿತ್ತು. ಬಳಿಕ ನಾಯಕ್ ರವರು ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವರ್ಗಾವಣೆ ದಸ್ತವೇಜು ಕಾಯ್ದೆಯ ಕಲಂ 138 ಅಡಿಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರವನ್ನು ಕೈಗೆತ್ತಿಕೊಂಡ ನ್ಯಾಯಾದೀಶರಾದ ಸೋಮಶೇಖರ್ ಎಸ್ ರವರು ವಿಚಾರಣೆ ನಡೆಸಿ, ಸಾಕ್ಷ್ಯಾದಾರವನ್ನು ಪರಿಗಣಿಸಿ ದೂರುದಾರರ ಮತ್ತು ಆರೋಪಿ ಪರ ವಕೀಲರ ವಾದ ವಿವಾದಗಳನ್ನು ಆಲಿಸಿ ಆರೋಪಿಯ ಮೇಲಿನ ಆರೋಪವು ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆಯ ಆದೇಶ ನೀಡಿರುತ್ತಾರೆ. ಈ ಮಧ್ಯೆ ಆರೋಪಿಯು ಚೆಕ್ ನ ಮೊತ್ತ ರೂ 4,25,000ರ ಪೈಕಿ ರೂ 2,89,000 ವನ್ನು ಈಗಾಗಲೇ ದೂರುದಾರರಿಗೆ ಪಾವತಿಸಿದ್ದು, ಉಳಿದ ರೂ 1,36,000 ವನ್ನು ಈ ಫೆಬ್ರವರಿ ತಿಂಗಳ ಒಳಗಾಗಿ ಪಾವತಿಸುವಂತೆ ತೀರ್ಪು ನೀಡಿರುತ್ತಾರೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ 6 ತಿಂಗಳ ಕಾರಗೃಹ ಶಿಕ್ಷೆಯನ್ನು ಅನುಭವಿಸುವಂತೆ ಆದೇಶ ನೀಡಿದ್ದಾರೆ. ದೂರುದಾರರ ಪರವಾಗಿ ಸುಳ್ಯದ ನೋಟರಿ ವಕೀಲರಾದ ಕೃಷ್ಣ ಪ್ರಸಾದ್ ದೋಳ ರವರು ವಾದಿಸಿದ್ದರು.