ಲೇಖನ : ಚಿಂತೆಗಳ ಸುಳಿಯಲ್ಲಿ…

ಬದುಕು ಅಂದಮೇಲೆ ಅಲ್ಲಿ ಚಿಂತೆಗಳು ಇದ್ದೇ ಇರುತ್ತವೆ. ಬದುಕಿನಲ್ಲಿ ಚಿಂತೆಗಳು ಇಲ್ಲದೇ ಇರುವ ವ್ಯಕ್ತಿಗಳು ಈ ಜಗತ್ತಿನಲ್ಲಿ ಯಾರೊಬ್ಬರೂ ಇರಲಿಕ್ಕಿಲ್ಲ. ಪ್ರತಿಯೊಬ್ಬರಿಗೂ ಕೂಡ ಅವರವರ ಬದುಕಿನಲ್ಲಿ ಹಲವಾರು ಚಿಂತೆಗಳು ಇದ್ದೇ ಇರುತ್ತವೆ. ಒಂದು ವೇಳೆ ಚಿಂತೆಗಳೇ ಇಲ್ಲದಿರುವ ವ್ಯಕ್ತಿಗಳು ಯಾರಾದರೂ ಇದ್ದಾರೆ ಎಂದಾದರೆ ಅವರು “ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ರೆ” ಎನ್ನುವ ಗಾದೆ ಮಾತಿನಂತೆ ದಿನಪೂರ್ತಿ ಸದಾ ಸದ್ದು-ಗದ್ದಲಗಳಿಂದ ಗಿಜಿಗುಡುತ್ತಲೇ ಇರುವ ಬಹುದೊಡ್ಡ ಸಂತೆಯಲ್ಲಿಯೂ ಕೂಡ ಅತ್ಯಂತ ನೆಮ್ಮದಿಯಿಂದ ನಿದ್ರಿಸಬಲ್ಲರು. ಆದರೆ ಪ್ರಾಯಶಃ ಅಂತಹ ವ್ಯಕ್ತಿಗಳು ಯಾರೂ ಇರಲಿಕ್ಕಿಲ್ಲ ಎಂದೆನಿಸುತ್ತದೆ, ಏಕೆಂದರೆ ಇಂದು ಈ ಜಗತ್ತಿನಲ್ಲಿ ನಾವುಗಳು ಬದುಕುತ್ತಿದ್ದೇವೆ ಎಂದಾದರೆ ನಮಗೆ ಬುದ್ಧಿ ಬಂದಾಗಿನಿಂದ ಬದುಕಿನ ಕೊನೆಯವರೆಗೂ ಒಂದಲ್ಲ ಒಂದು ರೀತಿಯ ಚಿಂತೆಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ. ಬಾಲ್ಯದಲ್ಲಿ ಆಟ-ಪಾಠ, ಪರೀಕ್ಷೆಗಳ ಚಿಂತೆ, ಕಾಲೇಜು ಮೆಟ್ಟಿಲು ಹತ್ತಿದಾಗ ಭವಿಷ್ಯದಲ್ಲಿ ನಾವೇನಾಗಬೇಕು-ಯಾವ ವಿಷಯವನ್ನು ತೆಗೆದುಕೊಳ್ಳಬೇಕು ಎನ್ನುವ ಚಿಂತೆ, ಕಾಲೇಜು ಜೀವನ ಮುಗಿದ ನಂತರ ನೌಕರಿ ಹುಡುಕುವುದೋ ಅಥವಾ ಸ್ವಂತವಾಗಿ ಏನಾದರೂ ಮಾಡುವುದೋ ಎನ್ನುವ ಚಿಂತೆ, ಸ್ವಂತವೋ-ನೌಕರಿಯೋ ಏನಾದರೊಂದು ಮಾಡಿ ಜೀವನಕ್ಕೊಂದು ನೆಲೆಯನ್ನು ಕಂಡುಕೊಂಡ ನಂತರ ನಮ್ಮ ಹಾಗೂ ನಮ್ಮ ಕುಟುಂಬದ ಬದುಕನ್ನು ಸದೃಢವಾಗಿ ರೂಪಿಸಿಕೊಳ್ಳುವ ಚಿಂತೆ, ಇವೆಲ್ಲದರ ನಡುವೆ ಹೇಳದೇ-ಕೇಳದೇ ಬರುವ ನೂರೆಂಟು ಕಷ್ಟ-ನೋವುಗಳನ್ನು ಎದುರಿಸುವ ಚಿಂತೆ, ಕೊನೆಗೂ “ಈಸಬೇಕು-ಇದ್ದು ಜಯಿಸಬೇಕು” ಎನ್ನುವ ಗಾದೆ ಮಾತಿನಂತೆ ಬದುಕಿನಲ್ಲಿ ಬಂದಂತಹ ಎಲ್ಲಾ ಚಿಂತೆಗಳನ್ನು, ಕಷ್ಟ-ನೋವುಗಳನ್ನು ಧೈರ್ಯದಿಂದ ಎದುರಿಸಿ ಒಂದು ಸುಭದ್ರವಾದ ಸುಂದರ ಬದುಕನ್ನು ಕಟ್ಟಿಕೊಂಡು ಇನ್ನಾದರೂ ನೆಮ್ಮದಿಯಿಂದ ಬದುಕಬೇಕು ಎನ್ನುವಷ್ಟರಲ್ಲಿ ನಮ್ಮ ಜೀವನ ಕೊನೆಯ ಹಂತಕ್ಕೆ ಬಂದು ತಲುಪಿರುತ್ತದೆ. ನಮ್ಮ ಗಡ್ಡ-ತಲೆಗೂದಲು ಹಣ್ಣಾಗಿರುತ್ತದೆ, ಕಿವಿಗಳು ದೂರಾಗಿರುತ್ತವೆ, ಕಣ್ಣುಗಳು ಮಂಜಾಗಿರುತ್ತವೆ, ಕೈ-ಕಾಲುಗಳು ಶಕ್ತಿಯನ್ನು ಕಳೆದುಕೊಂಡಿರುತ್ತವೆ, ದೇಹ ನಿಶ್ಯಕ್ತವಾಗಿರುತ್ತದೆ, ನಮ್ಮ ದೇಹ ಕಾಯಿಲೆಗಳ ಗೂಡಾಗಿರುತ್ತದೆ, ನಮ್ಮ ಕೋಣೆಯ ಕಪಾಟು ಔಷಧಿಗಳ ಮಿನಿ ಮಳಿಗೆಯಾಗಿರುತ್ತದೆ. ಹಾಗೆಯೇ ಔಷಧಿಯನ್ನು ತೆಗೆದುಕೊಳ್ಳುತ್ತಾ ತಲೆ ಎತ್ತಿ ನೋಡುವಾಗ ನಮ್ಮ ಮುಂದಿನ ತಲೆಮಾರಿನವರು ಕೂಡ ನಾವು ನಡೆದುಬಂದ ಅದೇ ದಾರಿಯಲ್ಲಿ ಸಾಗಿ ಬರುತ್ತಿದ್ದಾರೆ, ನಾವು ಸಿಲುಕಿಕೊಂಡಿದ್ದ ಚಿಂತೆಗಳ ಸುಳಿಯಲ್ಲಿ ಅವರೂ ಸಿಲುಕಿಕೊಳ್ಳುತ್ತಿದ್ದಾರೆ… ಅದಕ್ಕಾಗಿಯೇ ಹಿರಿಯರು, ಜ್ಞಾನಿಗಳು ಹೇಳಿದ್ದು “ಚಿಂತೆಗೂ ಚಿತೆಗೂ ಒಂದು ಸೊನ್ನೆಯಷ್ಟೇ ವ್ಯತ್ಯಾಸ, ಚಿತೆ ಸತ್ತ ದೇಹವನ್ನು ಸುಟ್ಟರೆ ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ”… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading