ನಮ್ಮ ಮನೆಯ ಸಾಕುಪ್ರಾಣಿಗಳು ಹಾಗೂ ಕ್ರೂರ ಮನಸ್ಥಿತಿಯ ನಾವುಗಳು…

“ನಿಸ್ವಾರ್ಥ ಪ್ರೀತಿ” ಎನ್ನುವುದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಇರುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಪ್ರಾಣಿಗಳಲ್ಲಿ ಮನುಷ್ಯರಿಗಿಂತ ತುಸು ಹೆಚ್ಚೇ ಸ್ವಾರ್ಥರಹಿತ ಪ್ರೀತಿ ಹಾಗೂ ನಿಷ್ಠೆ ಇರುತ್ತದೆ. ಈಗ ಉದಾಹರಣೆಯಾಗಿ ನಾಯಿಗಳನ್ನು ಅಥವಾ ಶ್ವಾನಗಳನ್ನೇ ತೆಗೆದುಕೊಂಡರೂ ಅವುಗಳು ಒಂದು ಬಾರಿ ನಮ್ಮ ಮೇಲೆ ಪ್ರೀತಿ ಹಾಗೂ ನಿಷ್ಠೆಯನ್ನು ತೋರಿದರೆ ಕೊನೆಯವರೆಗೂ ಅವು ನಮ್ಮೊಂದಿಗೆ ಇರುತ್ತವೆ. ಎಂತಹುದೇ ಕಠಿಣ ಪರಿಸ್ಥಿತಿಗಳಲ್ಲೂ ಅವುಗಳು ನಮ್ಮನ್ನು ತೊರೆದು ದೂರ ಹೋಗಲಾರವು. ಅವುಗಳಿಗೆ ಬಡವ-ಶ್ರೀಮಂತರೆನ್ನುವ ಯಾವುದೇ ಬೇಧ-ಭಾವ ಇರುವುದಿಲ್ಲ. ಹಗಲು-ರಾತ್ರಿಯೆನ್ನದೇ ನಮ್ಮ ಮನೆಯನ್ನು ಕಾಯುವ ಅವುಗಳು ನಮ್ಮಿಂದ ಯಾವುದೇ ಹಣವನ್ನಾಗಲಿ ಅಥವಾ ವಸ್ತುಗಳನ್ನಾಗಲಿ ಬಯಸುವುದಿಲ್ಲ. ಅವುಗಳು ನಮ್ಮಿಂದ ಬಯಸುವುದು ಕೇವಲ ಮೂರು ಹೊತ್ತು ಆಹಾರ ಹಾಗೂ ಒಂದಿಷ್ಟು ಪ್ರೀತಿಯನ್ನು ಮಾತ್ರ. ನಮ್ಮ ಮನೆಯನ್ನು ಕಾಯುವುದರೊಂದಿಗೆ ನಮ್ಮ ಮನೆಯ ಸದಸ್ಯರ ಭಾವನೆಗಳನ್ನು ಅರ್ಥ ಮಾಡಿಕೊಂಡು ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುವ ಅವುಗಳು ಸಮಯ ಬಂದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಮನೆಯವರ ಪ್ರಾಣವನ್ನು ಕಾಪಾಡುವ ಧೈರ್ಯವನ್ನು ತೋರುತ್ತವೆ. ಕೇವಲ ಶ್ವಾನಗಳಷ್ಟೇ ಅಲ್ಲ ಹಸು, ಬೆಕ್ಕು ಸೇರಿದಂತೆ ಪ್ರತಿಯೊಂದು ಸಾಕುಪ್ರಾಣಿಗಳೂ ಕೂಡ ಹೀಗೆಯೇ, ಅವುಗಳು ಮನುಷ್ಯರಾದ ನಮ್ಮ ಮೇಲೆ ತೋರುವ ಆ ಪ್ರೀತಿಯಲ್ಲಿ ಹಾಗೂ ನಿಷ್ಠೆಯಲ್ಲಿ ಒಂದಿನಿತೂ ಕೂಡ ಸ್ವಾರ್ಥವಿರುವುದಿಲ್ಲ, ಆ ಪ್ರೀತಿ ಹಾಗೂ ನಿಷ್ಠೆ ನಿಷ್ಕಲ್ಮಶವಾಗಿರುತ್ತದೆ. ಆದರೆ ದುರಾದೃಷ್ಟವಶಾತ್ ಮನುಷ್ಯರು ಎನಿಸಿಕೊಂಡ ನಾವುಗಳು ಮಾತ್ರ ಇಂದು ಬದಲಾಗುತ್ತಿದ್ದೇವೆ, ನಮಗಾಗಿ ಇಷ್ಟೆಲ್ಲಾ ಮಾಡುವ, ಸದಾ ನಮ್ಮ ಪ್ರೀತಿಗಾಗಿ ಹಾತೊರೆಯುವ ಸಾಕುಪ್ರಾಣಿಗಳನ್ನು ನಾವುಗಳು ಇಂದು “ಸಾಕಲು ಕಷ್ಟವಾಗುತ್ತದೆ” ಎನ್ನುವ ನೆಪವೊಡ್ಡಿ ರಸ್ತೆ ಬದಿಯಲ್ಲಿ ತಂದು ಬಿಡುತ್ತಿದ್ದೇವೆ. ನಮ್ಮಿಂದ ಯಾವುದೇ ಪ್ರತಿಫಲಗಳನ್ನು ಅಪೇಕ್ಷಿಸದೇ ಸದಾ ನಮಗಾಗಿ ಬದುಕುವ ನಮ್ಮ ಮನೆಯ ಮೂಕ ಪ್ರಾಣಿಗಳ ಮುಗ್ಧ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ಸೋಲುತ್ತಿದ್ದೇವೆ, ನಾವು ಬಹಳಾ ಸ್ವಾರ್ಥಿಗಳಾಗುತ್ತಿದ್ದೇವೆ. ನಮಗಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡುವ ನಾವುಗಳು ನಮ್ಮ ಮನೆಯ ಸಾಕುಪ್ರಾಣಿಗಳಿಗೆ ದಿನನಿತ್ಯ ನಾವು ತಿನ್ನುವ ಆಹಾರದಲ್ಲೇ ಒಂದಿಷ್ಟು ಭಾಗವನ್ನು ನೀಡಲು ಹಿಂದೇಟು ಹಾಕುತ್ತಿದ್ದೇವೆ. “ಸಾಕಲು ಕಷ್ಟವಾಗುತ್ತಿದೆ” ಎನ್ನುವ ಕಾರಣವನ್ನು ನೀಡಿ ಅವುಗಳನ್ನು ರಸ್ತೆ ಬದಿಗೆ ತಳ್ಳುತ್ತಿದ್ದೇವೆ. ಈ ರೀತಿ ನಾವೇ ಸಾಕಿ ಬೆಳೆಸಿದ ನಮ್ಮ ಮನೆಯ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ನಾವುಗಳು ನಮ್ಮ ಮನೆಯಂಗಳದಲ್ಲಿ ನಮ್ಮ ಕಣ್ಣೆದುರೇ ಹುಟ್ಟಿ ಬೆಳೆದು ನಮ್ಮ ಮೇಲೆ ಬೆಟ್ಟದಷ್ಟು ನಿಸ್ವಾರ್ಥ ಪ್ರೀತಿ ಹಾಗೂ ನಿಷ್ಠೆಯನ್ನು ಇರಿಸಿಕೊಂಡಿರುವ ಆ ಮುಗ್ಧ ಮನಸ್ಸಿನ ಮೂಕ ಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ನಮ್ಮ ಮನಸ್ಥಿತಿ ಅದೆಷ್ಟು ಕ್ರೂರವಾಗಿರಬಹುದು ಎಂಬುವುದನ್ನು ಒಮ್ಮೆ ಯೋಚಿಸೋಣ, ನಮ್ಮಲ್ಲಿದ್ದ ಮಾನವೀಯ ಮೌಲ್ಯಗಳು ಅದೆಲ್ಲಿ ಮರೆಯಾಗಿ ಹೋದವು ಎಂಬುವುದನ್ನು ಒಮ್ಮೆ ಹುಡುಕೋಣ, ನಾವುಗಳು ಅವುಗಳ ಜಾಗದಲ್ಲಿದ್ದಿದ್ದರೆ ನಮ್ಮ ಪರಿಸ್ಥಿತಿ ಹೇಗಿರಬಹುದು ಎಂಬುವುದನ್ನು ಒಂದು ಬಾರಿ ಯೋಚಿಸೋಣ, ಸಾಧ್ಯವಾದರೆ ಇನ್ನು ಮುಂದಾದರೂ ನಾವುಗಳು ಬದಲಾಗೋಣ, ನಮ್ಮ ಮನೆಯ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡದಿರೋಣ, ಮೂಕ ಪ್ರಾಣಿಗಳ ಮುಗ್ಧ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡೋಣ, ಅವುಗಳು ನಮ್ಮ ಮೇಲೆ ತೋರುವ ಪ್ರೀತಿಯ ಅರ್ಧದಷ್ಟು ಪ್ರೀತಿಯನ್ನಾದರೂ ನಾವು ಅವುಗಳ ಮೇಲೆ ತೋರೋಣ, ನಾವೂ ಬದುಕೋಣ-ನಮ್ಮೊಂದಿಗೆ ಅವುಗಳನ್ನೂ ಬದುಕಲು ಬಿಡೋಣ, ಅವುಗಳೂ ಕೂಡ ನಮ್ಮಂತೆಯೇ ಒಂದು ಜೀವ ಎನ್ನುವುದನ್ನು ಮರೆಯದಿರೋಣ… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading