ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಡಿ.23 ಶನಿವಾರದಂದು ಮೆಟ್ರಿಕ್ ಮೇಳ ಹಾಗೂ ವರ್ಗಾವಣೆಗೊಂಡ ಪದವೀಧರ ಶಿಕ್ಷಕಿ
ಕುಮಾರಿ ಸುಧಾರಾಣಿ ಇವರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಪಾರೆಪ್ಪಾಡಿ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಕ್ಷಕಿಯ ಪರಿಚಯಿಸುವುದರೊಂದಿಗೆ ಸಾರ್ಥಕ ಸೇವೆಯ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶಿಕ್ಷಕಿಯ ಮುಂದಿನ ವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಬಳಿಕ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿ, ಶ್ರೀ ವಿಜಯಕುಮಾರ್ ಚಾರ್ಮತ, ಶ್ರೀ ಹರೀಶ್ ಕೊಯ್ಲ, ಶಾಲಾ ಮುಖ್ಯೋಪಾಧ್ಯಾಯರು ದೀಪ ಬೆಳಗಿಸುವ ಮೂಲಕ ಮೆಟ್ರಿಕ್ ಮೇಳ ಹಾಗೂ ಬೀಳ್ಕೊಡುಗೆ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಹಲವಾರು ವಿದ್ಯಾರ್ಥಿಗಳು ಶಿಕ್ಷಕಿಗೆ ಸ್ಮರಣಿಕೆಗಳನ್ನು ನೀಡಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶಿಕ್ಷಕಿಯ ಗುಣಗಾನಗೈದು ಆಶಯ ಗೀತೆಗಳನ್ನು ಹಾಡುವುದರೊಂದಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ್ ಕುಮಾರ್ ಚಾರ್ಮತ, ಹರೀಶ್ ಕೊಯ್ಲ ಇವರುಗಳಲ್ಲದೆ ಶಿಕ್ಷಕರಾದ ಶ್ರೀಮತಿ ವನಜಾಕ್ಷಿ, ಶ್ರೀಮತಿ ಮೋಕ್ಷ, ಶ್ರೀಮತಿ ಸವಿತಾ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಉಮೇಶ್ವರಿಯವರು ವೇದಿಕೆಯಲ್ಲಿದ್ದ ಗಣ್ಯರ ಹಾಗೂ ಶಿಕ್ಷಕರ ಸಹಕಾರದೊಂದಿಗೆ ಹೂ ಹಾರ, ಶಾಲು, ಫಲ ತಾಂಬೂಲ, ಸ್ಮರಣಿಕೆ ನೀಡಿ ಕುಮಾರಿ ಸುಧಾರಾಣಿಯವರನ್ನು ಗೌರವಿಸಿದರು. ಬಳಿಕ ಸನ್ಮಾನವನ್ನು ಸ್ವೀಕರಿಸಿದ ಕುಮಾರಿ ಸುಧಾರಾಣಿಯವರು 1ರಿಂದ 7ನೇ ತರಗತಿಯ ಮಕ್ಕಳಿಗೆ ತಾವು ತಂದಿರುವ ತರಗತಿವಾರು ಸ್ಮರಣಿಕೆಗಳನ್ನು ಹಂಚಿ ಎಲ್ಲಾ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಗೌರವಿಸಿ, 3 ವರ್ಷ 6 ತಿಂಗಳ ತಮ್ಮ ಪ್ರಪ್ರಥಮ ಸರ್ಕಾರಿ ಸೇವೆಯ ಅವಿಸ್ಮರಣೀಯ ಅನುಭವಗಳನ್ನು, ಊರ ವಿದ್ಯಾಭಿಮಾನಿಗಳ , ಶಿಕ್ಷಕರ, ಎಸ್‌ಡಿಎಂಸಿ ಯವರ ಸಹಕಾರವನ್ನು ಸ್ಮರಿಸಿದರು. ಕೊನೆಗೆ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಶ್ರೀಮತಿ ಉಮೇಶ್ವರಿಯವರು ತಮ್ಮ ಅಭಿಮಾನದ ಮಾತುಗಳನ್ನಾಡಿ ಶಿಕ್ಷಕಿಗೆ ಶುಭ ಹಾರೈಸಿದರು. ಕೊನೆಗೆ ಶ್ರೀಮತಿ ಮೋಕ್ಷ ಧನ್ಯವಾದಗೈದರು. ಈ ದಿನದ ಕಾರ್ಯಕ್ರಮ ನಿರ್ವಹಣೆಯನ್ನು ಸಹ ಶಿಕ್ಷಕರುಗಳಾದ ಶ್ರೀಮತಿ ವನಜಾಕ್ಷಿ, ಶ್ರೀಮತಿ ಸವಿತಾ ನಿರ್ವಹಿಸಿದರು. ಶಾಲೆಯಲ್ಲಿ ಆಯೋಜಿಸಿದ್ದ ಮೆಟ್ರಿಕ್ ಮೇಳದಲ್ಲಿ 9 ಸ್ಟಾಲ್ ಗಳಿದ್ದು ಬಗೆ ಬಗೆಯ ವಸ್ತುಗಳು ಕಂಗೊಳಿಸುತ್ತಿದ್ದವು. ವಿದ್ಯಾರ್ಥಿಗಳು ಪೋಷಕರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.