"ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು" ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ತಾಲೂಕು ಪಂಚಾಯತ್ ಸುಳ್ಯ, ಶಾಲಾ ಶಿಕ್ಷಣ ಇಲಾಖೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆಗಸ್ಟ್ 18ರಂದು ನಡೆದ ತಾಲೂಕು ಮಟ್ಟದ ಪಿ.ಎಂ.ಪೋಷಣ್ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. "ಇಂದು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು ಪೌಷ್ಟಿಕ ಆಹಾರ ವಿತರಣೆಯಿಂದ ಮಕ್ಕಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ" ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಬಿ.ಇ ರಮೇಶ್ ಅಭಿಪ್ರಾಯಪಟ್ಟರು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಜಾನಕಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವನಿತಾ ಸುವರ್ಣ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶ್ರೀ ತೀರ್ಥರಾಮ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ತಾಲೂಕು ಅಧ್ಯಕ್ಷ ಶ್ರೀ ಪ್ರಕಾಶ ಮೂಡಿತ್ತಾಯ ಪಿ ಮತ್ತು ಎಸ್ಡಿಎಂಸಿ ಕಾರ್ಯಾಧ್ಯಕ್ಷ ಶ್ರೀ ಪದ್ಮನಾಭ ಗೌಡ ಪೂದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಇವರನ್ನು ತಾಲೂಕು ಪಂಚಾಯತ್ ಅಕ್ಷರ ದಾಸೋಹ ಕಛೇರಿ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಪಂಚಾಯತ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ಎಂ.ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಆಂಗ್ಲ ಭಾಷಾ ಶಿಕ್ಷಕ ಶ್ರೀ ಲಿಂಗಪ್ಪ ಬೆಳ್ಳಾರೆ ವಂದಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಗಣಿತ ಶಿಕ್ಷಕರಾದ ಶ್ರೀ ಸಂತೋಷ್ ನಿರೂಪಿಸಿದರು.
Like this:
Like Loading...