ಸರಕಾರ ಆದೇಶದ ಪ್ರಕಾರ ಸುಳ್ಯ ವಿಧಾನಸಭಾ ಕ್ಷೇತ್ರ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆಯಾಗಿತ್ತು. ಇದರ ಆದೇಶ ಪ್ರತಿ ಸಿಕ್ಕಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಹೊಸ ಆದೇಶದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿದೆ. ಇದರಲ್ಲಿ ನಾಮನಿರ್ದೇಶನಗೊಂಡ ಸದಸ್ಯ ವೆಂಕಟ್ ವಳಲಂಬೆ ಯವರ ಬದಲಾಗಿ ಕಡಬ ತಾಲೂಕಿನ ರಾಕೇಶ್ ರೈ ಕೆಡೆಂಜಿ ಯವರನ್ನು ಅಯ್ಕೆ ಮಾಡಿದೆ.
ಅಕ್ರಮ ಸಕ್ರಮ ಸಮಿತಿಗೆ ನೂತನ ಸದಸ್ಯರ ನೇಮಕ ಜನವರಿಯಲ್ಲಿ ನಡೆದು ಆದೇಶವಾಗಿತ್ತು. ಈ ಆದೇಶದಲ್ಲಿ ಮಾಜಿ ಮಂಡಲ ಸಮಿತಿ ಅದ್ಯಕ್ಷ ವೆಂಕಟ್ ವಳಲಂಬೆ ಹೆಸರಿತ್ತು. ಈ ಆದೇಶ ಮಾಧ್ಯಮಗಳಿಗೆ ನಿನ್ನೆ ಸಿಕ್ಕಿ ವರದಿ ಪ್ರಸಾರಗೊಂಡ ಕೂಡಲೇ ಎಚ್ಚೆತ್ತ ಬಿಜೆಪಿ ಬದಲಾದ ಆದೇಶ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿದೆ.ಈ ಪಟ್ಟಿ ಕೂಡ ಮೇ ತಿಂಗಳಲ್ಲಿ ಬದಲಾಗಿ ಆದೇಶವಾಗಿತ್ತು. ಆದರೂ ಸಮಿತಿ ರಚನೆಯಾಗಿರುವ ಬಗ್ಗೆ, ಬದಲಾಗಿರುವ ಬಗ್ಗೆ ಮಾಹಿತಿ ನೀಡದೇ ಇದುವರೆಗೆ ಯಾಕೆ ಮುಚ್ಚಿಟ್ಟಿತ್ತು ಎಂದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ “ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿಗೆ ಹಾಗೂ ಕಡಬ ತಾಲೂಕಿಗೆ ಪ್ರತ್ಯೇಕ ಅಕ್ರಮ ಸಕ್ರಮ ಸಮಿತಿ ಆಗಬಹುದೆಂದು ಈ ಹಿಂದೆ ಯೋಚಿಸಿ ಹೆಸರು ಸೂಚಿಸಲಾಗಿತ್ತು. ಕ್ಷೇತ್ರಕ್ಕೆ ಒಂದೇ ಸಮಿತಿ ಮಾಡಬೇಕಾಗಿ ಬಂದುದರಿಂದ ಕಡಬ ತಾಲೂಕಿನವರು ಒಬ್ಬರು ಬೇಕೆನ್ನುವ ದೃಷ್ಟಿಯಿಂದ ವೆಂಕಟ್ ವಳಲಂಬೆಯವರು ಶಾಸಕರಲ್ಲಿ, ರಾಕೇಶ್ ರೈ ಕೆಡೆಂಜಿಯವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿರುತ್ತಾರೆ. ಅದರಂತೆ ಬದಲಾವಣೆ ಮಾಡಲಾಗಿದೆ” ಎಂದು ತಿಳಿಸಿದೆ.
ಈ ಬಗ್ಗೆ ವೆಂಕಟ್ ವಳಲಂಬೆ ಯವರನ್ನು ಸಂಪರ್ಕಿಸಿದಾಗ “ನಾನು ಮಂಡಲ ಸಮಿತಿ ಅಧ್ಯಕ್ಷನಾಗಿರುವಾಗಲೇ ಬದಲಾವಣೆ ಆಗಿದೆ, ಕಡಬ ತಾಲೂಕಿನವರ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ನಾನೇ ರಾಕೇಶ್ ರೈಯವರನ್ನು ಆಯ್ಕೆ ಮಾಡಲು ಶಾಸಕರಿಗೆ ಹೇಳಿದ್ದೆ, ಹಳೆ ಆದೇಶ ಪ್ರತಿ ಮಾಧ್ಯಮಗಳಿಗೆ ಸಿಕ್ಕಿರುವುದರಿಂದ ಗೊಂದಲವಾಗಿದೆ” ಎಂದರು.