Ad Widget

ಕೋವಿಡ್ 19 ರ ಪರಿಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ- ಅನಗತ್ಯ ಭಯ ಪಡುವ ಅಗತ್ಯವಿಲ್ಲ : ಡಯಾಲಿಸಿಸ್ ಪುನರಾರಂಭಿಸಲು ಸಚಿವರಿಗೆ ಮನವಿ ಮಾಡಲಾಗಿದೆ -ಶಾಸಕ ಅಂಗಾರ ಹೇಳಿಕೆ


ಕೊರೋನಾ ವೈರಸ್ ಪೀಡಿತರ ಸಂಖ್ಯೆಯು ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದು ಸುಳ್ಯ ತಾಲೂಕು ಆಡಳಿತವು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ . ಸುಳ್ಯ ತಾಲೂಕಿನಲ್ಲಿ ಇವರೆಗೆ ಒಟ್ಟು 16 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಕೆಲಸ ಮಾಡಿದ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಯಾನಿಟೈಸೇಶನ್ ಗಾಗಿ ಎರಡು ದಿನಗಳ ಕಾಲ ಸೇವೆ ಸ್ಥಗಿತಗೊಳಿಸಲಾಗಿದ್ದು ನಾಳೆ ( ಜುಲೈ 11 ) ಸೇವೆಯು ಪುನರಾರಂಭಗೊಳ್ಳಲಿದೆ. ರೋಗಲಕ್ಷಣಗಳಿಲ್ಲದೇ ಕೊರೋನ ವರದಿ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ನಿಯಮಗಳ ಪ್ರಕಾರ ಹೋಮ್ ಐಸೊಲೇಶನ್‌ಗೆ ಸೂಚಿಸುತ್ತಿದ್ದು ಮನೆಗಳಲ್ಲಿಯೇ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ . ಮನೆಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವ ಮತ್ತು ಜನನಿಬಿಡ ಕಾಲೊನಿಗಳಲ್ಲಿರುವ ರೋಗ ಲಕ್ಷಣವಿಲ್ಲದ ಪಾಸಿಟಿವ್ ಬಂದ ವ್ಯಕ್ತಿಗಳಿಗೆ , ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಪಟ್ಟ ವಿದ್ಯಾರ್ಥಿನಿಲಯ ಕೊಡಿಯಾಲಬೈಲು ( ಕೆರೆಮೂಲೆ ) ಹಾಗೂ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಕುರುಂಜಿಬಾಗ್ ವ್ಯವಸ್ಥೆಯನ್ನು ಮಾಡಲಾಗಿದೆ . ಅಲ್ಲದೆ ಅಗತ್ಯಬಿದ್ದಲ್ಲಿ ತಾಲೂಕಿನ ಇತರೆ ಕಡೆಗಳಲ್ಲಿರುವ ಹಾಸ್ಟೆಲ್‌ಗಳಲ್ಲಿ ಕೂಡಾ ವ್ಯವಸ್ಥೆ ಸಿದ್ಧಗೊಳಿಸಲು ಸೂಚಿಸಲಾಗಿದೆ , ಜ್ವರ ಮತ್ತಿತರ ರೋಗ ಲಕ್ಷಣಗಳಿರುವ ವ್ಯಕ್ತಿಗಳ ಚಿಕಿತ್ಸೆಗಾಗಿ ಈಗಾಗಲೇ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಟ್ಟು 270 ಬೆಡ್‌ಗಳು , ಕೆ.ವಿ.ಜಿ. ಆಯುರ್ವೇದ ಕಾಲೇಜಿನಲ್ಲಿ 68 ಬೆಡ್ ಗಳು ಹಾಗೂ ಜ್ಯೋತಿ ಆಸ್ಪತ್ರೆಯಲ್ಲಿ 13 ಬೆಡ್‌ಗಳನ್ನು ಮೀಸಲಿರಿಸಲಾಗಿದೆ . ಅಲ್ಲದೆ ತೀವ್ರ ರೋಗಲಕ್ಷಣವಾದ ಉಸಿರಾಟದ ತೊಂದರೆಯಿರುವವರಿಗೆ ಆಕ್ಸಿಜನ್ ಸಹಿತ 25 ಬೆಡ್‌ಗಳು , ವೆಂಟಿಲೇಟರ್ ಸಹಿತ 5 ಬೆಡ್ ಗಳು ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಾಡಲಾಗಿರುತ್ತದೆ. ಕೊರೋನಾ ಕುರಿತ ಜಾಗೃತಿಗಾಗಿ ಮತ್ತು ಅಗತ್ಯ ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಗೆ ನೆರವಾಗಲು ಗ್ರಾಮ ಪಂಚಾಯತ್ ಮಟ್ಟಗಳಲ್ಲಿ ಸಮಿತಿಯನ್ನು ರಚಿಸಲಾಗಿದೆ . ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಡುಮಟ್ಟದಲ್ಲಿ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ , ಸುಳ್ಯ ತಾಲೂಕಿನಲ್ಲಿ ಅತೀವ ಮಳೆಯಾಗುತ್ತಿದ್ದು , ಈ ಸಂದರ್ಭದಲ್ಲಿ ಕೊರೋನಾ ಮಾತ್ರವಲ್ಲದೆ ಇತರೆ ಸಾಂಕ್ರಾಮಿಕ ರೋಗಗಳು ಕೂಡ ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಸ್ವಯಂನಿಯಂತ್ರಣ ಹೇರಿಕೊಂಡು ಸಾಮಾಜಿಕ ಆಂತರ ಕಾಪಾಡುವುದು , ಕಡ್ಡಾಯ ಮಾಸ್ಕ್ ಧರಿಸುವುದು , ಸ್ಯಾನಿಟೈಸರ್ ಬಳಸುವುದು ಹಾಗೂ ಅಗತ್ಯ ಕೆಲಸಗಳಿಗೆ ಮಾತ್ರ ನಗರ ಪ್ರದೇಶಗಳಿಗೆ ಬಂದು ಹೋಗುವಂತೆ ಹಾಗೂ ವರ್ತಕರು ಸ್ವ ಇಚ್ಛೆಯಿಂದ ಅಂಗಡಿ ಮುಂಗಟ್ಟುಗಳನ್ನು ನಿರ್ದಿಷ್ಟ ಸಮಯ ಮಾತ್ರ ತೆರೆದಿಟ್ಟು ಸಹಕರಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ . ಅಂತೆಯೇ ಯಾವುದೇ ವದಂತಿಗಳನ್ನು ಹಬ್ಬಿಸದೇ , ಹಾಗೂ ಗಾಳಿಸುದ್ದಿಗಳಿಗೆ ಕಿವಿಗೊಡದೇ ಕೊರೋನಾ ನಿಯಂತ್ರಣದಲ್ಲಿ ಪ್ರತಿಯೊಬ್ಬರೂ ಸರಕಾರದೊಂದಿಗೆ ಸಹಕರಿಸುವಂತೆ ವಿನಂತಿಸಲಾಗಿದೆ ಎಂದು ಶಾಸಕ ಎಸ್ ಅಂಗಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವವರ ಅನಾನುಕೂಲತೆಯನ್ನು ಮನಗಂಡು ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಇಬ್ಬರು ತಂತ್ರಜ್ಞರನ್ನು ನಿಯೋಜನೆಗೊಳಿಸುವ ಬಗ್ಗೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!