ವರದಿ. ಹಸೈನಾರ್ ಜಯನಗರ
ಕಳೆದ ಕೆಲ ದಿನಗಳ ಹಿಂದೆ ಗುರುಪುರ ಬಂಗ್ಲೆಗುಡ್ಡೆ ಪರಿಸರದಲ್ಲಿ ಗುಡ್ಡ ಕುಸಿದು ಸ್ಥಳದಲ್ಲಿದ್ದ 4 ಮನೆಗಳು ಸಂಪೂರ್ಣವಾಗಿ ಒಂದರ ಹಿಂದೆ ಒಂದು ಕುಸಿದು ಎರಡು ಜೀವಗಳನ್ನು ಬಲಿಪಡೆದುಕೊಂಡಿತ್ತು. ಸುಮಾರು 40ಕ್ಕೂ ಹೆಚ್ಚು ಮನೆಗಳ ಜನರು ಆತಂಕಕ್ಕೊಳಗಾಗಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರ ಗೊಳ್ಳಬೇಕಾಯಿತು. ಈ ಪ್ರದೇಶದಲ್ಲಿ ಈ ರೀತಿಯ ಅವಘಡ ಸಂಭವಿಸುವ ಮುನ್ನೆಚ್ಚರಿಕೆಯನ್ನು ಕೆಲವು ಸಂಘಟನೆಗಳು ಮತ್ತು ಸ್ಥಳೀಯರು ಕಳೆದ ಎರಡು ವರ್ಷಗಳ ಹಿಂದೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು ಎಂಬ ಮಾತು ಕೇಳಿಬರುತ್ತಿದೆ.
ಈ ರೀತಿಯ ಪ್ರದೇಶಗಳು ನಮ್ಮ ಜಿಲ್ಲೆಯಲ್ಲಿ ಇನ್ನೂ ಹಲವಾರು ಇದೆ. ಸುಳ್ಯ ತಾಲೂಕಿನ ಸುಳ್ಯ ನಗರದ ಕೆಲವು ಪ್ರದೇಶಗಳು ಇದಕ್ಕೆ ಭಿನ್ನವಾಗಿ ಏನೂ ಇಲ್ಲ.
ಸುಳ್ಯ ನಗರ ಪಂಚಾಯತಿಗಳೊಪಟ್ಟ ಕುರುಂಜಿ ಗುಡ್ಡೆ ಪರಿಸರದಲ್ಲಿ ಕೆವಿಜಿ ಮೆಡಿಕಲ್ ಆಸ್ಪತ್ರೆಯ ಹಿಂಭಾಗದಲ್ಲಿ ಇದೇ ರೀತಿಯ ದೃಶ್ಯಗಳು ಕಂಡು ಬರುತ್ತಿದೆ. ಸುಮಾರು 20ಕ್ಕೂ ಹೆಚ್ಚು ಮನೆಗಳು ಗುಡ್ಡೆಯ ಮೇಲೆ ನಿಂತಿದೆ. ಕಳೆದ ಕೆಲವು ವರ್ಷಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯ ತಳಭಾಗದಿಂದಲೇ ಮಣ್ಣು ಕುಸಿಯಲಾರಂಭಿಸಿದೆ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಭಯದ ವಾತಾವರಣದಲ್ಲಿ ಸ್ಥಳೀಯರು ಜೀವನ ಸಾಗಿಸುತ್ತಿದ್ದಾರೆ. ಕೇವಲ 4,5 ಸೆಂಟ್ಸ್ ಜಾಗಗಳಲ್ಲಿ ಮನೆ ನಿರ್ಮಿಸಿ ಸುಮಾರು 20 ವರ್ಷಗಳಿಂದ ಈ ಪರಿಸರದಲ್ಲಿ ಸ್ಥಳೀಯರು ವಾಸಿಸುತ್ತಿದ್ದು ವರ್ಷಗಳು ಕಳೆದಂತೆ ಮಣ್ಣು ಕುಸಿದು ಕುಸಿದು ಅಪಾಯದ ಸ್ಥಿತಿಗೆ ತಲುಪಿದೆ. ತಮ್ಮ ತಮ್ಮ ಮನೆಗಳ ಮುಂಜಾಗೃತೆಗಾಗಿ ಬೃಹತ್ ತಡೆಗೋಡೆಗಳನ್ನು ಕಟ್ಟುವ ಪರಿಸ್ಥಿತಿಯಲ್ಲೂ ಸ್ಥಳೀಯರು ಇಲ್ಲ. ಪರಸ್ಪರ ಅವರು ಮಾಡಲಿ ಇವರು ಮಾಡಲಿ ಎಂದು ತರ್ಕಬದ್ಧವಾಗಿ ದಿನಕಳೆಯುತ್ತಿದ್ದಾರೆ.
ಇದೇ ವಿಷಯದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸ್ಥಳೀಯರಿಬ್ಬರು ನೀರು ಹರಿದು ಬರುವ ಕುರಿತು, ತಡೆಗೋಡೆ ನಿರ್ಮಿಸುವ ಕುರಿತು ಸುಳ್ಯ ಪೊಲೀಸ್ ಠಾಣಾ ಮೆಟ್ಟಿಲನ್ನು ಕೂಡ ಏರಿರುವ ಪ್ರಸಂಗವು ನಡೆದಿರುತ್ತದೆ.
ಇದೇ ಪರಿಸರದಲ್ಲಿ ಸುಳ್ಯದ ನ್ಯಾಯಾಲಯ, ತಾಲೂಕು ಕಚೇರಿ, ಸಂಬಂಧಪಟ್ಟ ಎಲ್ಲಾ ಉನ್ನತ ಅಧಿಕಾರಿಗಳ ಕಛೇರಿಗಳು ಕೂಗಳತೆಯ ದೂರದಲ್ಲಿದ್ದರೂ ಈ ಜನರ ದುಸ್ಥಿತಿ ಯಾರ ಗಮನಕ್ಕೂ ಬಾರದೆ ಇರುವುದು ಶೋಚನೀಯವೇ ಸರಿ.
ಒಟ್ಟಿನಲ್ಲಿ ಈ ರೀತಿಯ ದೃಶ್ಯಗಳು ಕಂಡಾಗ ಸಂಬಂಧಪಟ್ಟ ಇಲಾಖೆಯವರು, ಜನಪ್ರತಿನಿಧಿಗಳು ಕಂಡೂ ಕಾಣದಂತೆ ನಟಿಸಿದ್ದಲ್ಲಿ ಸುಳ್ಯದಲ್ಲಿ ಯೂ ಬಂಗ್ಲೆಗುಡ್ಡೆ ಯಂತಹ ಘಟನೆ ನಡೆಯದೇ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ .ಏನಾದರೂ ಪ್ರಾಣ ಹಾನಿ ಸಂಭವಿಸಿ, ಆಸ್ತಿಪಾಸ್ತಿ ನಷ್ಟ ಉಂಟಾಗಿ ಸರಕಾರ ಪರಿಹಾರ ಧನ ನೀಡುವುದಕ್ಕೆ ಮೊದಲೇ ಸರಕಾರ ಎಚ್ಚೆತ್ತು ಅದೇ ಪರಿಹಾರಧನ ದಿಂದ ಸಾರ್ವಜನಿಕರ ಜೀವವನ್ನು , ಅವರ ಆಸ್ತಿಪಾಸ್ತಿಗಳನ್ನು ರಕ್ಷಿಸಬಹುದಲ್ಲವೇ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.