ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲೆಯಾಗಿರುವ ಶಿವಮೊಗ್ಗ ಎಪಿಎಂಸಿಯಲ್ಲಿ ಬಿಜೆಪಿ ಬಹುಮತವಿದ್ದರೂ ಸ್ವಪಕ್ಷದ ಸದಸ್ಯರೋರ್ವರ ಅಡ್ಡ ಮತದಾನದಿಂದ ಬಿಜೆಪಿ ಅಧಿಕಾರದ ಹೊಸ್ತಿಲಲ್ಲಿ ಮುಗ್ಗರಿಸಿದೆ . ಪರಿಣಾಮ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎರಡೂ ಕೂಡಾ ಜೆಡಿಎಸ್ ಪಾಲಾಗುವ ಮೂಲಕ ಬಿಜೆಪಿ ಹಾಗೂ ಮುಖ್ಯಮಂತ್ರಿ ಭಾರೀ ಮುಖಭಂಗ ಅನುಭವಿಸುವಂತಾಗಿದೆ . ಶಿವಮೊಗ್ಗ ಎಪಿಎಂಸಿಗೆ ಕೊನೆಯ 20 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬುಧವಾರ ನಡೆಯಿತು . ಈ ಹಿಂದೆ ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿತ್ತು . ಕೊನೆಯ ಅವಧಿಯಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಬಹುಮತ ಬಿಜೆಪಿ ಬಳಿ ಇದ್ದುದರಿಂದ ಬಿಜೆಪಿ ಸುಲಭವಾಗಿ ಅಧಿಕಾರ ಪಡೆಯುತ್ತದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು . ಬಿಜೆಪಿ 6 ನಿರ್ದೇಶಕರ ಜೊತೆಗೆ 3 ಮಂದಿ ನಾಮ ನಿರ್ದೇಶಕರು ಸೇರಿ 9 ನಿರ್ದೇಶಕರನ್ನು ಹೊಂದಿದ್ದರೆ , ಜೆಡಿಎಸ್ 4 , ಕಾಂಗ್ರೆಸ್ 3 ಹಾಗೂ ಪಕ್ಷೇತರ ನಿರ್ದೇಶಕರು 1 ಸ್ಥಾನ ಸೇರಿದರೂ 8 ಮಂದಿ ಮಾತ್ರ ಇದ್ದರು . 9 ಸ್ಥಾನ ಹೊಂದಿದ್ದ ಬಿಜೆಪಿ ಸುಲಭವಾಗಿ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ನಿಚ್ಚಳವಾಗಿತ್ತು . ಆದರೆ ಬಿಜೆಪಿಯ ಸದಸ್ಯರೊಬ್ಬರೇ ಅಡ್ಡ ಮತದಾನ ಮಾಡಿದ ಪರಿಣಾಮ ಬಿಜೆಪಿ ಅಧಿಕಾರ ಕಳೆದು ಕೈ ಕೈ ಹಿಸುಕಿಕೊಳ್ಳುವಂತಾಯಿತು . ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಬಿಜೆಪಿ ಮುಖಭಂಗ ಅನುಭವಿಸುವಂತಾಗಿದೆ . ಕೊನೆಗೂ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ದುಗ್ಗಪ್ಪ ಗೌಡ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಆಯ್ಕೆಯಾಗಿದ್ದಾರೆ .
- Saturday
- November 2nd, 2024