ಹೊಸದಿಲ್ಲಿ: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ ಭಾರತ ಚೀನಾ ಪಡೆಗಳು ಮಾತಕತೆಯಲ್ಲಿ ತೊಡಗಿರುವಾಗಲೇ, ಗಿಲ್ಗಿಟ್- ಬಲ್ಟಿಸ್ಥಾನ್ ನತ್ತ ಪಾಕಿಸ್ಥಾನ ತನ್ನ ಸೇನಾ ಪಡೆಯನ್ನು ಕಳುಹಿಸಿದೆ. ಅಷ್ಟೇ ಅಲ್ಲದೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ಕುತಂತ್ರದಿಂದ ಚೀನಾ ಉಗ್ರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇಂಡಿಯಾ ಟುಡೆ ಈ ಬಗ್ಗೆ ವರದಿ ಮಾಡಿದ್ದು, ಉತ್ತರ ಲಡಾಖ್ ಪ್ರಾಂತ್ಯದತ್ತ ಪಾಕಿಸ್ಥಾನ ತನ್ನ 20,000 ಹೆಚ್ಚುವರಿ ಸೈನಿಕರ ಪಡೆಯನ್ನು ಕಳುಹಿಸಿದೆ ಎಂದಿದೆ.
ಪಾಕಿಸ್ಥಾನವು ಚೀನಾದೊಂದಿಗೆ ಸೇರಿ ಜಂಟಿ ದಾಳಿ ನಡೆಸಲು ಕಾರ್ಯತಂತ್ರ ರೂಪಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಈ ಕುರಿತು ಭಾರತೀಯ ಸೈನ್ಯ ಮತ್ತು ಗುಪ್ತಚರ ಇಲಾಖೆಗಳು ಚರ್ಚೆ ನಡೆಸಿದೆ ಎನ್ನಲಾಗಿದೆ.
ಚೀನಾ ಜೊತೆಗೆ ಸೇರಿಕೊಂಡಿರುವ ಪಾಕಿಸ್ಥಾನದ ಐಎಸ್ ಐ, ಯುದ್ದೋನ್ಮತ್ತ ಶಸ್ತ್ರ ಸಜ್ಜಿತ ಉಗ್ರರನ್ನು ಗಡಿ ಭಾಗಕ್ಕೆ ಕಳುಹಿಸಿದೆ ಎನ್ನಲಾಗಿದೆ. ಚೀನಾ ಪಡೆಯು ಅಲ್ ಬದ್ರ್ ಎಂಬ ಉಗ್ರ ಸಂಘಟನೆಯೊಂದಿಗೆ ಮಾತುಕತೆಯನ್ನೂ ನಡೆಸುತ್ತಿದೆ ಎಂದು ವರದಿಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಮೂಲಕ ಭಾರತದಲ್ಲಿ ಆಂತರಿಕ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ರಯತ್ನಿಸಬಹದು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಭಾರತೀಯ ಸೇನಾ ಪಡೆಗಳು ಜಮ್ಮು ಕಾಶ್ಮೀರದಲ್ಲಿ ಸುಮಾರು 120 ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಗಮನಾರ್ಹ ಅಂಶವೆಂದರೆ ಅದರಲ್ಲಿ ಹೆಚ್ಚಿನವರು ಸ್ಥಳೀಯರಾಗಿದ್ದಾರೆ. ಬೆರಳೆಣಿಕಯಷ್ಟು ಮಂದಿ ಮಾತ್ರ ಪಾಕ್ ಮೂಲದ ಉಗ್ರರಾಗಿದ್ದಾರೆ.
ಜಮ್ಮು ಕಾಶ್ಮೀರದ ಸೋಪೋರ್ ನಲ್ಲಿ ಇಂದು ಮುಂಜಾನೆ ಗಸ್ತು ತಿರುಗುತ್ತಿದ್ದ ಸಿಆರ್ ಪಿಎಫ್ ಪಡೆಗಳ ಮೇಲೆ ಉಗ್ರ ದಾಳಿಯಾಗಿದೆ. ದಾಳಿಯಲ್ಲಿ ಓರ್ವ ಯೋಧ ಮತ್ತು ಓರ್ವ ನಾಗರಿಕ ಮೃತರಾದರೆ, ಇಬ್ಬರು ಯೋಧರು ಗಾಯಗೊಂಡಿದ್ದಾರೆ.