ಕುಕ್ಕೆ ದೇವಳದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಾಭಾವಿ ಸಭೆ – “ಜಾತ್ರಾಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವರ ಸಹಕಾರ ಅತ್ಯಗತ್ಯ” : ಅಪರ ಜಿಲ್ಲಾಧಿಕಾರಿ ರಾಜು.ಕೆ

ಸುಬ್ರಹ್ಮಣ್ಯ : “ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ. ಬ್ರಹ್ಮರಥೋತ್ಸವ ಎಳೆಯುವ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ರಥ ಎಳೆಯಲು ಪಾಸ್ ವಿತರಿಸಲು ಮಾನದಂಡ ಮಾಡಿಕೊಂಡು ಅದರ ಪ್ರಕಾರವೇ ವ್ಯವಸ್ಥಿತವಾಗಿ ಭಕ್ತರಿಗೆ ಪಾಸ್ ವಿತರಿಸಬೇಕು” ಎಂದು ಅಪರ ಜಿಲ್ಲಾಧಿಕಾರಿ ರಾಜು.ಕೆ ಆದೇಶಿಸಿದರು.

. . . . . . . . .

ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀ ದೇವಳದ ಮೇಲ್ಮಹಡಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಅಧಿಕ ಭಕ್ತ ವೃಂದಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಸೃಷ್ಠಿಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ” ಎಂದರು.

. . . . . . .

ಬೀದಿ ಉರುಳು ಸೇವೆ ಮಾಹಿತಿ ನೀಡಿ : “ಬೀದಿ ಉರುಳುಸೇವೆ ಕೈಗೊಳ್ಳುವ ಭಕ್ತರಿಗೆ ಈ ಬಗ್ಗೆ ಸವಿವರವಾದ ಮಾಹಿತಿ ನೀಡಬೇಕು. ಯಾವ ಸಮಯದಲ್ಲಿ ಉರುಳು ಸೇವೆ ಮಾಡಬೇಕು, ಎಡೆಸ್ನಾನ ಮಾಡಬೇಕು ಎಂಬುದಾಗಿ ಪತ್ರಿಕಾ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಎಡೆಸ್ನಾನ ಮಾಡುವ ಬಗ್ಗೆ ಮಾನ್ಯ ನ್ಯಾಯಾಲಯಾದ ಆದೇಶದಂತೆ ಕ್ರಮ ವಹಿಸಬೇಕು” ಎಂದು ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ಹೆಚುವರಿ ಬಸ್ ವ್ಯವಸ್ಥೆ ಮಾಡಿ : “ಜಾತ್ರಾ ಸಮಯ ಲಕ್ಷಾಂತರ ಭಕ್ತರು ಆಗಮಿಸುವ ಕಾರಣ ಅವರ ಅನುಕೂಲತೆಗೆ 5 ಡಿಪೋಗಳಿಂದ ಹೆಚ್ಚುವರಿ ಸರಕಾರಿ ಬಸ್ಸುಗಳ ವ್ಯವಸ್ಥೆ ಮಾಡಬೇಕು. ಹಾಸನ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳ ನಿಯೋಜನೆ ಮಾಡಬೇಕು” ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಆದೇಶಿಸಿದರು. ಲಕ್ಷ ದೀಪೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೋಡೆಲ್ ಅಧಿಕಾರಿಯನ್ನು ನೇಮಿಸಲು ಎಡಿಸಿ ಆದೇಶಿಸಿದರು.

18 ಪ್ರಮುಖ ವಿಷಯಗಳ ಚರ್ಚೆ : ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಸುರಕ್ಷತೆ ಹಾಗೂ ಸೌಲಭ್ಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ 18 ಪ್ರಮುಖ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಬಂದೋಬಸ್ತ್ ವ್ಯವಸ್ಥೆ, ಹೆಚ್ಚುವರಿ ಸಿಬ್ಬಂದಿಗಳ ನೇಮಕ, ಹೊರರೋಗಿ ಘಟಕ, ನಿರಂತರ ವಿದ್ಯುತ್ ಸರಬರಾಜು, ರಸ್ತೆಗಳ ಸುಸ್ಥಿತಿ ಕಾಪಾಡುವುದು, ನೀರು ಸರಬರಾಜು, ಪಾರ್ಕಿಂಗ್, ಕುಮಾರಧಾರ ಸ್ನಾನಘಟ್ಟದಲ್ಲಿ ಹೂಳೆತ್ತುವ ಕಾರ್ಯ, ಕುಣಿತ ಭಜನೆ, ಸ್ವಯಂಸೇವಕರ ನಿಯೋಜನೆ, ವಿಶೇಷ ಭೋಜನ ವ್ಯವಸ್ಥೆ, ಪ್ರಸಾದ ಭೋಜನ ವ್ಯವಸ್ಥೆ,ಶುಚಿತ್ವ, ಸಂತೆ ವ್ಯಾಪಾರ, ಕೃಷಿ ಮೇಳ, ಸುಡುಮದ್ದು ಪ್ರದರ್ಶನ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿನ ಗಣ್ಯರು : ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್.ಎಸ್ ಇಂಜಾಡಿ, ಡಿವೈಎಸ್‌ಪಿ ಪ್ರಮೋದ್ ಕುಮಾರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಪಿಡಬ್ಲ್ಯೂಡಿ ಎಇಇ ಶ್ರೀಕಾಂತ್, ಠಾಣಾಧಿಕಾರಿ ಆಂಜನೇಯ ರೆಡ್ಡಿ, ವಲಯಾರಣ್ಯಧಿಕಾರಿ ಚೇತನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರವೀಣ ರೈ ಮರುವಂಜ, ಲೀಲಾಮನಮೋಹನ್, ಅಶೋಕ್ ನೆಕ್ರಾಜೆ, ಅಜಿತ್ ಕುಮಾರ್ ಪಾಲೇರಿ, ಸೌಮ್ಯ ಭರತ್, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಆಲ್ಕಬೆ, ಪವನ್ ಎಂ.ಡಿ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ.ಅಧಿಕಾರಿಗಳು, ದೇವಳದ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading