ಬೆಳೆ ಸಾಲ ಮಿತಿ ಹೆಚ್ಚಳ ಅನುಷ್ಠಾನ, ಮಳೆ ಮಾಪನ ಕೇಂದ್ರಗಳ ದುರಸ್ತಿ ಹಾಗೂ ದುಬಾರೆ ಮಾದರಿ ಆನೆ ಶಿಬಿರ ಸ್ಥಾಪನೆಗೆ ಆಗ್ರಹ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ‘ಕೃಷಿಕರ ಹಿತರಕ್ಷಣಾ ವೇದಿಕೆ’ಯಿಂದ ಮನವಿ

ಸುಳ್ಯ: ರೈತರ ಪ್ರಮುಖ ಬೇಡಿಕೆಗಳಾದ ಶೂನ್ಯ ಬಡ್ಡಿದರದ ಬೆಳೆ ಸಾಲದ ಮಿತಿ ಹೆಚ್ಚಳದ ಸಮರ್ಪಕ ಅನುಷ್ಠಾನ ಹಾಗೂ ದೋಷಪೂರಿತ ಮಳೆ ಮಾಪನ ಕೇಂದ್ರಗಳ ದುರಸ್ತಿಗೆ ಆಗ್ರಹಿಸಿ ಸುಳ್ಯದ ‘ಕೃಷಿಕರ ಹಿತರಕ್ಷಣಾ ವೇದಿಕೆ’ಯ ನಿಯೋಗವು ಗುರುವಾರ(ನ.26) ಬೆಳಿಗ್ಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಎರಡು ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿತು. ವೇದಿಕೆಯ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ ಅವರು ಈ ಎರಡೂ ಮನವಿಗಳನ್ನು ಶಾಸಕರಿಗೆ ಹಸ್ತಾಂತರಿಸಿದರು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯಗಳನ್ನು ಸದನದ ಗಮನಕ್ಕೆ ತಂದು ಸರ್ಕಾರದಿಂದ ಸೂಕ್ತ ಕ್ರಮ ಕೊಡಿಸುವಂತೆ ವೇದಿಕೆಯು ಶಾಸಕರಲ್ಲಿ ವಿನಂತಿಸಿದೆ.

. . . . . . . . .

2026-27ನೇ ಸಾಲಿಗೆ ಸರ್ಕಾರವು ಶೂನ್ಯ ಬಡ್ಡಿದರದ ಅಲ್ಪಾವಧಿ ಬೆಳೆ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹವಾದರೂ, ಕ್ಷೇತ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಇದರ ಅನುಷ್ಠಾನದ ಬಗ್ಗೆ ರೈತರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಮೊದಲ ಮನವಿಯಲ್ಲಿ ವಿವರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಂದೇಶಗಳು ಹರಿದಾಡುತ್ತಿದ್ದರೂ, ಕೆಲವು ಸಹಕಾರ ಸಂಘಗಳಲ್ಲಿ ಇನ್ನೂ ₹3 ಲಕ್ಷದ ಹಳೆಯ ಮಿತಿಯನ್ನೇ ಅನುಸರಿಸಲಾಗುತ್ತಿದೆ ಎಂಬ ಗೊಂದಲ ರೈತರಲ್ಲಿದೆ. ಕೃಷಿ ಚಟುವಟಿಕೆಗಳಿಗೆ ಸಹಕಾರ ಸಂಘಗಳ ಸಾಲವನ್ನೇ ಅವಲಂಬಿಸಿರುವ ರೈತರಿಗೆ ಈ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗದೆ, ತಕ್ಷಣವೇ ₹5 ಲಕ್ಷದವರೆಗಿನ ಶೂನ್ಯ ಬಡ್ಡಿದರದ ಸಾಲ ಸಿಗುವಂತಾಗಲು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಸಂಬಂಧಪಟ್ಟ ಇಲಾಖೆ ಮತ್ತು ಸಹಕಾರ ಸಂಘಗಳಿಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

. . . . . . .

ಮಳೆ ಮಾಪನ ಕೇಂದ್ರಗಳ ಸುಧಾರಣೆ ಕುರಿತಾದ ಎರಡನೇ ಮನವಿಯಲ್ಲಿ, ಸುಳ್ಯ, ಕಡಬ ಹಾಗೂ ಪುತ್ತೂರು ಭಾಗಗಳು ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಿಂದ ಕೂಡಿದ್ದು, ಭೌಗೋಳಿಕ ವೈವಿಧ್ಯತೆಯಿಂದಾಗಿ ಒಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮಳೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿರುತ್ತದೆ ಎಂದು ತಿಳಿಸಲಾಗಿದೆ. ಬೆಳೆ ವಿಮೆ ಹಾಗೂ ಹವಾಮಾನ ಆಧಾರಿತ ಬೆಳೆ ಪರಿಹಾರ ಯೋಜನೆಗಳಿಗೆ ಸ್ಥಳೀಯ ಮಳೆ ಮಾಪನ ಕೇಂದ್ರಗಳ ದತ್ತಾಂಶವೇ ಆಧಾರವಾಗಿದೆ. ಆದರೆ, ರೈತರು ಮತ್ತು ಸರ್ಕಾರ ವಿಮಾ ಕಂತು ಪಾವತಿಸುತ್ತಿದ್ದರೂ ಹಲವು ಮಳೆ ಮಾಪನ ಯಂತ್ರಗಳು ದೋಷಪೂರಿತವಾಗಿರುವುದರಿಂದ ನಿಖರ ಮಳೆ ಪ್ರಮಾಣ ದಾಖಲಾಗುತ್ತಿಲ್ಲ. ಇದರಿಂದ ಬೆಳೆ ಹಾನಿಯಾದಾಗ ರೈತರಿಗೆ ನ್ಯಾಯಯುತ ವಿಮಾ ಪರಿಹಾರ ಸಿಗದೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಸುಳ್ಯ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ಪರಿಶೀಲಿಸಿ ಕೆಟ್ಟುಹೋಗಿರುವ ಯಂತ್ರಗಳನ್ನು ತಕ್ಷಣ ದುರಸ್ತಿಪಡಿಸಬೇಕು ಹಾಗೂ ಅಗತ್ಯವಿರುವೆಡೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಸ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಿ ನಿಖರ ದತ್ತಾಂಶ ದೊರೆಯುವಂತೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಆಗ್ರಹಿಸಲಾಗಿದೆ. ಇದೇ ವೇಳೆ, ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹಾಗೂ ಮಾನವ-ಆನೆ ಸಂಘರ್ಷ ತೀವ್ರಗೊಂಡಿರುವ ಬಗ್ಗೆಯೂ ಶಾಸಕರ ಗಮನ ಸೆಳೆಯಲಾಯಿತು. ವನ್ಯಜೀವಿಗಳಿಂದ ಬೆಳೆ ರಕ್ಷಣೆಗೆ ಕೋವಿ ಪರವಾನಗಿ (ಲೈಸೆನ್ಸ್) ವಿಷಯದಲ್ಲಿ ತೀವ್ರ ವಿಳಂಬವಾಗುತ್ತಿದ್ದು, ಮತ್ತೊಂದೆಡೆ ಒಂದೆರಡಲ್ಲದೆ ಹಿಂಡು ಹಿಂಡಾಗಿ ಆನೆಗಳು ಕೃಷಿಕರ ತೋಟಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡುತ್ತಿವೆ. ಈ ಕುರಿತು ಸಂವಿಧಾನಬದ್ಧವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ಕಾನೂನಿನಲ್ಲಿ ಅವಕಾಶವಿದ್ದಲ್ಲಿ ವೈಜ್ಞಾನಿಕವಾಗಿ ಆನೆಗಳ ಸಂತಾನಹರಣ ನಡೆಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ವೇದಿಕೆ ಒತ್ತಾಯಿಸಿದೆ. ಇದರೊಂದಿಗೆ, ಸುಳ್ಯ ಭಾಗದಲ್ಲಿ ಸರ್ಕಾರವು ಸೂಕ್ತ ಪ್ರದೇಶವನ್ನು ಗುರುತಿಸಿ ಮೀಸಲಿರಿಸಿ, ಅಲ್ಲಿ ಕೊಡಗಿನ ದುಬಾರೆ ಆನೆ ಶಿಬಿರದ ಮಾದರಿಯಲ್ಲಿ ಆನೆ ಶಿಬಿರವನ್ನು ಸ್ಥಾಪಿಸಬೇಕೆಂದು ವೇದಿಕೆಯು ಪ್ರಸ್ತಾಪಿಸಿದೆ. ಇದರಿಂದ ಕಾಡಾನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ತೋಟಗಳತ್ತ ಬರುವುದನ್ನು ತಡೆಗಟ್ಟುವುದರ ಜೊತೆಗೆ, ಆನೆ ಸಫಾರಿ ಪ್ರವಾಸೋದ್ಯಮಕ್ಕೂ ಪೂರಕ ವಾತಾವರಣ ನಿರ್ಮಾಣವಾಗಿ ಸರ್ಕಾರಕ್ಕೆ ಉತ್ತಮ ಆದಾಯದ ಮೂಲವೂ ಆಗಲಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಈ ಸಂದರ್ಭದಲ್ಲಿ ನಂದಕುಮಾರ್, ಮೋಹನ್ ಬೋಳುಗುಡ್ಡೆ, ಗಣೇಶ್ ಭಜಂತಡ್ಕ ಮಡ್ತಿಲ, ಗಣೇಶ್ ಕೊಚ್ಚಿ, ನಿಖಿಲ್ ಮಾಡ್ತಿಲ, ಮುರಳೀಧರ ಕೊಚ್ಚಿ ಹಾಗೂ ಕಿಶನ್ ಜಬಳೆ ಜೊತೆಗಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading