ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.05ರಿಂದ 21ರವರೆಗೆ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ; ಡಿ.08ರಂದು ರಾತ್ರಿ ಲಕ್ಷದೀಪೋತ್ಸವ, ಡಿ.15ರಂದು ಪ್ರಾತಃಕಾಲ ಮಹಾರಥೋತ್ಸವ

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಪರಾಭವ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿಯಾದ ಡಿಸೆಂಬರ್ 05ರ ಶನಿವಾರದಿಂದ ಮಾರ್ಗಶಿರ ಶುದ್ಧ ದ್ವಾದಶಿಯಾದ ಡಿಸೆಂಬರ್ 21ರ ಸೋಮವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಪೂರ್ವಶಿಷ್ಟ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರೋತ್ಸವದ ಅಂಗವಾಗಿ ಡಿ.04ರ ಶುಕ್ರವಾರ ‘ಮೂಲಮೃತ್ತಿಕಾ’ ಪ್ರಸಾದ ವಿತರಣೆ ನಡೆಯಲಿದೆ. ಡಿ.05ರ ಶನಿವಾರ ಕೊಪ್ಪರಿಗೆ ಏರುವುದರೊಂದಿಗೆ ಉತ್ಸವಗಳಿಗೆ ಚಾಲನೆ ದೊರೆಯಲಿದ್ದು, ಅಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನಡೆಯಲಿದೆ. ಡಿ.06 ಹಾಗೂ 07ರಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ಡಿ.08ರಂದು ರಾತ್ರಿ ಲಕ್ಷದೀಪೋತ್ಸವ ಜರುಗಲಿದೆ.
ಡಿ.09 ಮತ್ತು 12ರಂದು ರಾತ್ರಿ ಶೇಷವಾಹನೋತ್ಸವ, ಡಿ.10ರಂದು ರಾತ್ರಿ ಅಶ್ವವಾಹನೋತ್ಸವ, ಡಿ.11ರಂದು ರಾತ್ರಿ ಮಯೂರ ವಾಹನೋತ್ಸವ ಹಾಗೂ ಡಿ.13ರಂದು ರಾತ್ರಿ ಹೂವಿನ ತೇರಿನ ಉತ್ಸವ ನಡೆಯಲಿದೆ. ಡಿ.14ರ ಸೋಮವಾರ ರಾತ್ರಿ ಪಂಚಮಿ ರಥೋತ್ಸವ ಹಾಗೂ ತೈಲಾಭ್ಯಂಜನ ಜರುಗಲಿದ್ದು, ಜಾತ್ರೋತ್ಸವದ ಪ್ರಮುಖ ಆಕರ್ಷಣೆಯಾದ ಚಂಪಾಷಷ್ಠಿ ಮಹಾರಥೋತ್ಸವವು ಡಿ.15ರ ಮಂಗಳವಾರ ಪ್ರಾತಃ ಕಾಲ ನೆರವೇರಲಿದೆ. ಡಿ.16ರ ಬುಧವಾರ ಅವಭೃತೋತ್ಸವ ಹಾಗೂ ನೌಕಾವಿಹಾರ ನಡೆಯಲಿದ್ದು, ಡಿ.21ರ ಸೋಮವಾರ ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ ಹಾಗೂ ದೈವಗಳ ನಡಾವಳಿಯೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ. ಕಿರುಷಷ್ಠಿ ಮಹೋತ್ಸವವು 2027ರ ಜನವರಿ 14ರಂದು ಜರುಗಲಿದೆ.
ಭಕ್ತಾದಿಗಳು ಆಗಮಿಸಿ, ಶ್ರೀ ದೇವರ ಮೂಲಮೃತ್ತಿಕಾ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತ ಶರತ್ ಬಿ(ಭಾ.ಆ.ಸೇ), ದ.ಕ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ(ಭಾ.ಆ.ಸೇ), ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ ಯೇಸುರಾಜ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಎಸ್ ಇಂಜಾಡಿ, ಸದಸ್ಯರಾದ ಸೀತಾರಾಮ ಎಡಪಡಿತ್ತಾಯ, ಸೌಮ್ಯ ಬಿ.ಕೆ, ಪ್ರವೀಣ ಎ, ಲೀಲಾ ಮನಮೋಹನ್, ಅಶೋಕ್ ನೆಕ್ರಾಜೆ, ಮಹೇಶ್ ಕುಮಾರ್ ಕೆ.ಎಸ್, ಅಜಿತ್ ಕುಮಾರ್, ಡಾ| ಬಿ.ರಘು, ಮಾಸ್ಟರ್‌ಪ್ಲಾನ್ ಮೇಲ್ವಿಚಾರಣಾ ಸಮಿತಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮನವಿ ಮಾಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading